‘ಚಂದದ ಪುಟಾಣಿ’ಗಳಿಗೆ ಬೆಳ್ಳಿ ಬಹುಮಾನ

DSC_3807
Published on

ಭೀಮಾ ಜುವೆಲ್ಸ್‌ನಲ್ಲಿ ಚಿಣ್ಣರ ಲೋಕ ಅನಾವರಣ

‘ಚಂದದ ಪುಟಾಣಿ ಸ್ಪರ್ಧೆ-2022’ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ

‘ವಿಜಯವಾಣಿ’, ‘ದಿಗ್ವಿಜಯ’ದಿಂದ ಆಯೋಜನೆ

ಮೈಸೂರು: ಅಲ್ಲೊಂದು ಚಿಣ್ಣರ ಲೋಕವೇ ನಿರ್ಮಾಣವಾಗಿತ್ತು. ಮುದ್ದು ಮಕ್ಕಳ ಮುಗ್ಧ ನಗು, ತುಂಟಾಟ, ರಂಪಾಟ… ಕೈಗೆ ಸಿಗದಾಗ ಅವುಗಳನ್ನು ಹಿಡಿಯಲು ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟು ಓಡುತ್ತಿದ್ದವು..!
ಇಂಥ ಮನಮೋಹಕ ದೃಶ್ಯಾವಳಿಗಳು ಕಂಡುಬಂದಿದ್ದು ಸಾಂಸ್ಕೃತಿಕ ನಗರಿ ಮೈಸೂರಿನ ಬಿ.ಎನ್.ರಸ್ತೆಯಲ್ಲಿರುವ ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದಾದ ಭೀಮಾ ಜುವೆಲ್ಸ್ ಮಳಿಗೆಯಲ್ಲಿ.

ಮಕ್ಕಳ ದಿನಾಚರಣೆ ಅಂಗವಾಗಿ ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಹಾಗೂ ‘ದಿಗ್ವಿಜಯ’ ಸುದ್ದಿವಾಹಿನಿ ವತಿಯಿಂದ ಭೀಮಾ ಜುವೆಲ್ಸ್ ಸಹಯೋಗದಲ್ಲಿ ಆಯೋಜಿಸಿದ್ದ ‘ಚಂದದ ಪುಟಾಣಿ ಸ್ಪರ್ಧೆ-2022’ರ ಬಹುಮಾನ ವಿತರಣಾ ಸಮಾರಂಭ ಸೋಮವಾರ ನಡೆಯಿತು.

ಹೆತ್ತವರ ಕಾತರದ ಕ್ಷಣಗಳ ನಡುವೆ ಪುಟಾಣಿಗಳಳ ಪುಟ್ಟ ಪುಟ್ಟ ಹೆಜ್ಜೆ ಹಾಗೂ ಗೆಜ್ಜೆಯ ನಾದದೊಂದಿಗೆ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಛಾಯಾಚಿತ್ರದಲ್ಲಿ ಮುದ್ದು ಮುದ್ದಾಗಿ ನಗುತ್ತಿದ್ದ ಪುಟಾಣಿ ಮಕ್ಕಳ ನೈಜ ಸೌಂದರ್ಯದ ಅನಾವರಣದೊಂದಿಗೆ ಮಕ್ಕಳ ಹೆತ್ತವರ ಸಂತೋಷದ ಕ್ಷಣದ ಕೌಟುಂಬಿಕ ವಾತಾವರಣ ಅಲ್ಲಿ ನೆಲೆಸಿತ್ತು. ಬಹುಮಾನ ವಿತರಣೆಯಲ್ಲಿ ಮಕ್ಕಳ ನಗು, ತುಂಟತನವನ್ನು ಪಾಲಕರು, ಪೋಷಕರು ಸವಿಯುವ ಸದವಕಾಶ ಲಭ್ಯವಾಗಿತ್ತು.

ನಿರ್ವಾಣ್ ಕಿನಿಲ್ ಪ್ರಥಮ:
ನಂಜನಗೂಡಿನ ಪುಟಾಣಿ ನಿರ್ವಾಣ್ ಕಿನಿಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ 50 ಗ್ರಾಂ ಬೆಳ್ಳಿಯನ್ನು ತನ್ನದಾಗಿಸಿಕೊಂಡನು. ಮೈಸೂರಿನ ಶ್ರೀರಾಂಪುರದ ಶೌರ್ಯ ಶ್ರೀವತ್ಸ ದ್ವಿತೀಯ ಸ್ಥಾನದೊಂದಿಗೆ 30 ಗ್ರಾಂ ಬೆಳ್ಳಿ ಪಡೆದುಕೊಂಡನು. ಚಾಮರಾಜನಗರದ ಪುಟಾಣಿ ಪ್ರಣವಿ ಜಿ.ಪ್ರಸಾದ್ ಮೂರನೇ ಸ್ಥಾನದೊಂದಿಗೆ 20 ಗ್ರಾಂ ಬೆಳ್ಳಿ ತನ್ನದಾಗಿಸಿಕೊಂಡಿತು. ಉಳಿದಂತೆ ಚಾಮರಾಜನಗರದ ಎಚ್.ಎಂ.ಪ್ರಥಮ್, ಎಸ್.ತಕ್ಷಾ, ಮಂಡ್ಯದ ಪ್ರೇಕ್ಷಾ ಸಿರಿ ಗೌಡ, ಮೈಸೂರಿನ ರಾಮಕೃಷ್ಣನಗರದ ಪ್ರಾಕಾಮ್ಯ ನವಲಗುಂದ, ವಿದ್ಯಾರಣ್ಯಪುರಂನ ಎಚ್.ಸಿ.ವಿಹಾನ್ ಸೂರ್ಯ, ಮೈಸೂರು ಲಲಿತಾದ್ರಿಪುರಂನ ತ್ರಿಶನ್ ಸಂದೇಶ್, ಮಂಡ್ಯದ ಲಿಯಾನ್ಸ್ ಇವನ್ ಸಾಗರ್ ಸಮಾಧಾನಕರ ಬಹುಮಾನ ಪಡೆದರು.

‘ವಿಜಯವಾಣಿ’ ಮೈಸೂರು ಬ್ಯೂರೋ ಸ್ಥಾನಿಕ ಸಂಪಾದಕ ಎಂ.ಆರ್.ಸತ್ಯನಾರಾಯಣ ಹಾಗೂ ಭೀಮಾ ಜುವೆಲ್ಸ್ ಮ್ಯಾನೇಜರ್ ಶ್ರೀನಿವಾಸ್ ಕೆ.ಭಟ್ ಬಹುಮಾನ ವಿತರಿಸಿದರು. ಜುವೆಲ್ಸ್ ಸಿಬ್ಬಂದಿ ಚಂದ್ರಶೇಖರ್, ಭರತ್ ಇದ್ದರು.

ಮಗು ಎನ್ನುವ ಶಬ್ದವೇ ಸ್ಫೂರ್ತಿ ನೀಡುತ್ತದೆ. ಮಕ್ಕಳನ್ನು ಎಲ್ಲೇ ನೋಡಿದರೂ ಖುಷಿಯಾಗುತ್ತದೆ. ಈ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಕೋರಿದಕ್ಕೆ ‘ವಿಜಯವಾಣಿ’ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ವ್ಯಾಪಾರದ ಜತೆಗೆ, ಸಾಮಾಜಿಕ ಕಳಕಳಿಯೂ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಸಂಸ್ಥೆಯಿಂದ ಅನೇಕ ಸಮಾಜಮುಖಿ ಕೆಲಸ ಮಾಡಲಾಗುತ್ತಿದೆ. ಮುಂದೆಯೂ ಮಾಡುತ್ತೇವೆ.ಶ್ರೀನಿವಾಸ್ ಕೆ.ಭಟ್, ಮ್ಯಾನೇಜರ್ ಭೀಮಾ ಜುವೆಲ್ಸ್ ಮಕ್ಕಳ ದಿನಾಚರಣೆ ಅಂಗವಾಗಿ ‘ಚಂದದ ಪುಟಾಣಿ ಸ್ಪರ್ಧೆ-2022’ ಆಯೋಜಿಸಲಾಗಿತ್ತು. ಸ್ಪರ್ಧೆಗೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಹಾಗೂ ಕೊಡಗು ಜಿಲ್ಲೆಗಳಿಂದ ನೂರಾರು ಪುಟಾಣಿ ಕಂದಮ್ಮಗಳ ಫೋಟೋಗಳು ಬಂದಿದ್ದವು. ಮಕ್ಕಳ ತಜ್ಞರು, ಖ್ಯಾತ ಛಾಯಾಚಿತ್ರಗಾರರನ್ನು ಒಳಗೊಂಡ ತಂಡ ವಿಜೇತರನ್ನು ಆಯ್ಕೆ ಮಾಡಿದೆ.ಎಂ.ಆರ್.ಸತ್ಯನಾರಾಯಣ, ಸ್ಥಾನಿಕ ಸಂಪಾದಕ, ವಿಜಯವಾಣಿ, ಮೈಸೂರು ಬ್ಯೂರೋ ‘ಚಂದದ ಪುಟಾಣಿ’ ಸ್ಪರ್ಧೆಯಲ್ಲಿ ನನ್ನ ಮೊಮ್ಮಗು ನಿರ್ವಾಣ್ ಕಿನಿಲ್ ಪ್ರಥಮ ಬಹುಮಾನ ಪಡೆದಿರುವುದಕ್ಕೆ ಖುಷಿಯಾಗಿದೆ. ಮಕ್ಕಳಿಗೆ ಇಂತಹ ಸ್ಪರ್ಧೆ ಆಯೋಜಿಸಿದ ‘ವಿಜಯವಾಣಿ’ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇನೆ.ರವಿ, ನಿರ್ವಾಣ್ ಕಿನಿಲ್ ತಾತ

ಎಲ್ಲರಿಗೂ ಪ್ರಮಾಣಪತ್ರ
‘ಚಂದದ ಪುಟಾಣಿ ಸ್ಪರ್ಧೆ-2022’ಕ್ಕೆ ಮಕ್ಕಳ ಫೋಟೋ ಕಳಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಗುತ್ತದೆ. ಫೋಟೋ ಕಳಿಸಿದ ಎಲ್ಲರೂ ಬಿ.ಎನ್.ರಸ್ತೆಯ ಭೀಮಾ ಜುವೆಲ್ಸ್ ಮಳಿಗೆಯಲ್ಲಿ ಪ್ರಮಾಣಪತ್ರ ಪಡೆದುಕೊಳ್ಳಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net