ಪ್ರೀತಿಯಿಂದ ಬದುಕಿ, ಎಲ್ಲರನ್ನೂ ಪ್ರೀತಿಸಿದ ದಿ.ಮೇಟಿ

Kasapa
ಸಾಹಿತಿ ದಿ. ಮೇಟಿ ಮುದಿಯಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಕಥಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮುರಳೀಧರ ಉಪಾಧ್ಯ ಹಿರಿಯಡ್ಕ, ಪೂರ್ಣಿಮಾ, ವಿಶ್ವನಾಥ ಶೆಣೈ, ನಿರಂಜನ್​ ಚೊಳಯ್ಯ, ಬಿ. ಜನಾರ್ದನ್​ ಭಟ್​, ಶಾಂತಾ ಮೇಟಿ, ರವಿರಾಜ ಎಚ್​.ಪಿ. ಇದ್ದರು.
Published on

ಲೇಖಕ ಜಿ.ಪಿ. ಪ್ರಭಾಕರ ಮೆಚ್ಚುಗೆ | ಕಥಾ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ
ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಕನ್ನಡದ ಉಪನ್ಯಾಸಕ, ಪ್ರಾಂಶುಪಾಲ ಸಾಹಿತಿ, ದಿ. ಮೇಟಿ ಮುದಿಯಪ್ಪ ಅವರ ಬದುಕೇ ಒಂದು ಕಥೆ. ಅವರ ಕುರಿತು ಮಾತನಾಡಿದರೆ ಇನ್ನಷ್ಟು ಕಥೆಗಳು ತೆರೆದುಕೊಳ್ಳುತ್ತವೆ. ಅವರ ಸಾಹಿತ್ಯದಲ್ಲಿ ಬಂಡಾಯ ಕಂಡು ಬಂದರೂ ಸಹ ಪ್ರೀತಿಯಿಂದ ಬದುಕಿದವರು, ಎಲ್ಲರನ್ನೂ ಪ್ರೀತಿಸಿದವರು ಎಂದು ಲೇಖಕ ಜಿ.ಪಿ. ಪ್ರಭಾಕರ ತುಮರಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್​ ಉಡುಪಿ ಜಿಲ್ಲೆ, ಉಡುಪಿ ತಾಲೂಕು ಘಟಕ, ಉಡುಪಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್​, ಸಂಸ್ಕೃತಿ ಸಿರಿ ಟ್ರಸ್ಟ್​ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ.) ಉಡುಪಿ ಆಶ್ರಯದಲ್ಲಿ ಉಡುಪಿಯ ಯಕ್ಷಗಾನ ಕಲಾರಂಗದಲ್ಲಿ ಭಾನುವಾರ ಆಯೋಜಿಸಿದ್ದ ಸಾಹಿತಿ ದಿ. ಮೇಟಿ ಮುದಿಯಪ್ಪ ಸ್ಮರಣಾರ್ಥ ಜಿಲ್ಲಾ ಮಟ್ಟದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮೇಟಿ ಬದುಕು-ಬರಹ ಕುರಿತು ಮಾತನಾಡಿದರು.

ಪ್ರಾಮಾಣಿಕ ವ್ಯಕ್ತಿತ್ವ

ಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರೂ ಆಗಿದ್ದ ಮೇಟಿ, ಎಲ್ಲೆಡೆ ಸ್ನೇಹಿತರ ಬಳಗ ಹೊಂದಿದ್ದರು. ಬಯಲುಸೀಮೆಯ ಮೂಲದವರಾದರೂ ಸಹ ಉಡುಪಿಯ ಅಷ್ಟ ಮಠಗಳೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಕುರುಬ ಸಮಾಜದ ಪ್ರತಿನಿಧಿಯಾಗಿ ಈ ಭಾಗದಲ್ಲಿ ಸಂಘಟನೆ ಮಾಡಿದ್ದರು. ಅತ್ಯಂತ ಪ್ರಾಮಾಣಿ ವ್ಯಕ್ತಿತ್ವದ, ಯಾರ ಮೇಲೂ ದ್ವೇಷಭಾವ ಹೊಂದಿರದ, ಎಲ್ಲ ಕಡೆಯೂ ಸಲ್ಲಬಲ್ಲ ದೈವೀಸ್ವರೂಪದ ಮನುಷ್ಯರಾಗಿದ್ದರು ಎಂದರು.

ಸುರಭಿ ಸುಧೀರ್​ ಕೊಡವೂರು ರಂಗಗೀತೆ ಹಾಡಿದರು. ತಾಲೂಕು ಕಸಾಪ ಘಟಕದ ಅಧ್ಯಕ್ಷ ರವಿರಾಜ ಎಚ್​.ಪಿ. ಪ್ರಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ರಂಜಿನಿ ವಸಂತ್​ ವಂದಿಸಿದರು. ಗೌರವ ಕಾರ್ಯದರ್ಶಿ ಜನಾರ್ದನ ಕೊಡವೂರು ಕಾರ್ಯಕ್ರಮ ನಿರೂಪಿಸಿದರು.

ನಾಟಕ ಪ್ರದರ್ಶನ

ಸಭಾಕಾರ್ಯಕ್ರಮದ ಬಳಿಕ ಪ್ರಕಾಶ್​ ರಾಜ್​ ನಿರ್ಮಾಣದಲ್ಲಿ ಡಾ. ಶ್ರೀಪಾದ್​ ಭಟ್​ ಅವರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಮಂಟೇಸ್ವಾಮಿ ಕಾವ್ಯ ಪ್ರಯೋಗ ಎಂಬ ನಾಟಕ ಪ್ರದರ್ಶನಗೊಂಡಿತು.

ವಿಜೇತರಿಗೆ ಬಹುಮಾನ ವಿತರಣೆ

ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ಡಾ. ನಮೃತಾ ಬಿ., ದ್ವಿತೀಯ- ಡಾ. ಜಿ.ಪಿ. ನಾಗರಾಜ್​, ಮೆಚ್ಚುಗೆ ಬಹುಮಾನ ಗಳಿಸಿದ ರಾಮಾಂಜಿ ನಮ್ಮಭೂಮಿ, ಮಂಜುನಾಥ ಕಾರ್ತಟ್ಟು ಹಾಗೂ ಮಂಜುನಾಥ ಹಿಲಿಯಾಣ ಅವರಿಗೆ ಪ್ರಶಸ್ತಿ ನೀಡಿ, ಸನ್ಮಾನಿಸಲಾಯಿತು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕೇಂದ್ರ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಮುರಳೀಧರ ಉಪಾಧ್ಯ ಹಿರಿಯಡ್ಕ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷ ವಿಶ್ವನಾಥ ಶೆಣೈ, ಜಿಲ್ಲಾ ಸಾಹಿತ್ಯ ಪರಿಷತ್​ ಅಧ್ಯಕ್ಷ ನಿರಂಜನ್​ ಚೊಳಯ್ಯ, ಸಾಹಿತಿ. ಬಿ. ಜನಾರ್ದನ್​ ಭಟ್​, ಶಾಂತಾ ಮೇಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net