ಪ್ರಿಯಾಂಕ ಖರ್ಗೆಗೆ ಕೇಸ್ ಹಾಕುವುದೇ ಫುಲ್​ಟೈಮ್ ಕೆಲಸ

tejaswi surya
Published on

ಹುಬ್ಬಳ್ಳಿ: ಸಚಿವ ಪ್ರಿಯಾಂಕ ಖರ್ಗೆ ಅವರು ಕೇಸ್ ಹಾಕುವುದನ್ನೇ ಫುಲ್​ಟೈಮ್ ಕೆಲಸ ಮಾಡಿಕೊಂಡಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಟೀಕಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಿಯಾಂಕ ಖರ್ಗೆ ಸಚಿವರಾದರೂ ಅವರಿಗೆ ಬೇರೆ ಯಾವುದೇ ಕೆಲಸ ಇಲ್ಲ ಎನಿಸುತ್ತದೆ. ಹುಡುಕಿ ಹುಡುಕಿ ಕೇಸ್ ಹಾಕಿಸುವ ಕೆಲಸ ಮಾಡುತ್ತಾರೆ. ಅವರು ಹಾಕಿರುವ ಕೇಸ್​ಗಳಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ ವಾಪಸ್ ಕಳಿಸುತ್ತದೆ ಎಂದರು.

ಗುರುವಾರ ವಕ್ಪ್ ತಿದ್ದುಪಡಿ ಮಸೂದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷರು ಭೇಟಿ ನೀಡಿದ್ದ ಸಂದರ್ಭದಲ್ಲಿ ಹಾವೇರಿಯ ರೈತನ ಅಹವಾಲು ಪಡೆಯಲಾಗಿತ್ತು. ಅದರಲ್ಲಿ ರೈತನ ಜಮೀನು ವಕ್ಪ್ ಎಂದು ಬದಲಾಯಿಸಿದ ಕಾರಣ ಸಣ್ಣಪ್ಪ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ತಿಳಿಸಿದರು.

ಈ ಬಗ್ಗೆ ಮಾಧ್ಯಮದಲ್ಲಿಯೂ ವರದಿ ಪ್ರಕಟಗೊಂಡಿತ್ತು. ರೈತನ ಕುಟುಂಬದವರು ಮಾತನಾಡಿರುವುದು ಸಹ ಪ್ರಸಾರಗೊಂಡಿತ್ತು. ವೆಬ್​ವೊಂದು ಈ ಸುದ್ದಿ ಪ್ರಸಾರ ಮಾಡಿದ್ದನ್ನು ಗಮನಿಸಿ, ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂಬ ಕಾರಣಕ್ಕೆ ಟ್ವಿಟ್ ಮಾಡಿದ್ದೆ. ಹಾವೇರಿ ಎಸ್​ಪಿ ಈ ರೀತಿಯ ಘಟನೆ ನಡೆದಿಲ್ಲವೆಂಬ ಹೇಳಿಕೆ ನೀಡಿದ ನಂತರ ಟ್ವಿಟ್ ಡಿಲೀಟ್ ಮಾಡಿದ್ದಾಗಿ ಹೇಳಿದರು.

ಟ್ವಿಟ್ ಮಾಡಿದ್ದಕ್ಕಾಗಿ ನನ್ನ ವಿರುದ್ಧ ಎಫ್​ಐಆರ್ ದಾಖಲಿಸಿರುವ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೇರೆ ಕೆಲಸ ಇಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ರೈತನ ಕುಟುಂಬವೂ ನನ್ನನ್ನು ಸಂರ್ಪಸಿದೆ. ಪಹಣಿಯಲ್ಲಿ ವಕ್ಪ್ ಹೆಸರು ಇದೆ. ಪೊಲೀಸರು ಒತ್ತಡಕ್ಕೆ ಒಳಗಾಗಿ ಈ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.

ಸರ್ಕಾರ ರೈತರ ಜಾಗ ಕಬಳಿಸಲು ವಕ್ಪ್ ಬೋರ್ಡ್​ಗೆ ಬೆಂಬಲ ನೀಡುತ್ತಿದೆ. ವಕ್ಪ್​ನ ಹಳೇಯ ತಪ್ಪುಗಳನ್ನು ಮುಚ್ಚಿ ಹಾಕಲಾಗುತ್ತಿದೆ. ಪ್ರಿಯಾಂಕ ಖರ್ಗೆ ಹಾಗೂ ಸರ್ಕಾರ ರಾಜ್ಯದ ಜನರ ಕ್ಷಮೆ ಕೇಳಬೇಕು. ರಾಜ್ಯ ಸರ್ಕಾರ ತನ್ನ ಮತಬ್ಯಾಂಕ್​ಗಾಗಿ ವಕ್ಪ್ ಬಳಸಿಕೊಂಡು ರೈತರ ಸಾವಿರಾರು ಎಕರೆ ಜಮೀನು ಕಬಳಿಸುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net