

ಬೆಂಗಳೂರು: ಟಿಐಇ ಜಾಗತಿಕ ಶೃಂಗಸಭೆಯು (ಟಿಜಿಎಸ್ 24) ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ದಲ್ಲಿ ಮಂಗಳವಾರ ಆರಂಭವಾಯಿತು. ಜಾಗತಿಕ ಉದ್ಯಮಿಗಳು, ಹೂಡಿಕೆದಾರರು ಮತ್ತು ನೀತಿ ನಿರೂಪಕರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಬೆಂಗಳೂರಿನ ಟಿಐಇ ಸಂಸ್ಥೆ ಈ ಶೃಂಗಸಭೆಯನ್ನು ಆಯೋಜಿಸಿದೆ.
ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರ, ಎಸ್ಟಿಪಿಐ ಮತ್ತಿತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಾವೀನ್ಯತೆ, ಸಹಯೋಗ ಮತ್ತು ಉದ್ಯಮಶೀಲತೆಯ ಭವಿಷ್ಯದ ಪ್ರಮುಖ ವಿಷಯಗಳನ್ನು ಜಾಗತಿಕ ವಾಣಿಜ್ಯೋದ್ಯಮಿಗಳು, ಹೂಡಿಕೆದಾರರು ಮತ್ತು ಚಿಂತಕರೊಂದಿಗೆ ಚರ್ಚಿಸುವ ವಿವಿಧ ಗೋಷ್ಠಿಗಳು ಶೃಂಗಸಭೆಯಲ್ಲಿ ನಡೆದವು.
ಐಟಿ ಬಿಟಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯೂಜೆರ್ಸಿಯ ಲೆಫ್ಟಿನೆಂಟ್ ಗವರ್ನರ್ ತಹೇಶಾ ವೇ, ಎಸ್ಟಿಪಿಐ ಮಹಾನಿರ್ದೇಶಕ ಅರವಿಂದ್ ಕುಮಾರ್, ಸರ್ಕಾರದ ಪ್ರಧಾನ ಕಾರ್ಯದರ್ಶಿ ಏಕರೂಪ ಕೌರ್, ಕರ್ನಾಟಕ ವಿಷನ್ ಬೋರ್ಡ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ ಬಿ.ವಿ.ನಾಯ್ಡು, ಟಿಜಿಎಸ್ ಅಧ್ಯಕ್ಷ ಮದನ್ ಪದಕಿ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಖ್ಯಾತ ನಟ ವಿದ್ಯಾ ಬಾಲನ್ ಮತ್ತು ಸಿದ್ಧಾರ್ಥ್ ರಾಯ್ ಕಪೂರ್ರೊಂದಿಗಿನ ಸಂವಾದದಲ್ಲಿ ಚಿತ್ರರಂಗದಲ್ಲಿರುವ ಅವಕಾಶ, ಆಧುನಿಕತೆ, ಆವಿಷ್ಕಾರಗಳ ಕುರಿತು ಮಾಹಿತಿ ನೀಡಿದರು. ಟೆನಿಸ್ ಚಾಂಪಿಯನ್ ಆಂಡ್ರೆ ‘ಮ್ಯಾರಥಾನ್ ಮೈಂಡ್ಸೆಟ್’ ಎಂಬ ವಿಷಯದ ಕುರಿತು ಮಾತನಾಡಿದರು. 8ನೇ ತರಗತಿಗೆ ಶಾಲೆಯಿಂದ ಹೊರಗುಳಿದ ಆಂಡ್ರೆ ಟೆನಿಸ್ನಲ್ಲಿ ತೊಡಗಿಸಿಕೊಂಡು 80 ಸಾವಿರ ಮಕ್ಕಳಿಗೆ ಪ್ರಯೋಜನವಾಗುವ 130 ಶಾಲೆಗಳನ್ನು ನಿರ್ಮಿಸಿದ ಕತೆ ಶೃಂಗಸಭೆಯಲ್ಲಿ ಪಾಲ್ಗೊಂಡವರ ಗಮನಸೆಳೆಯಿತು.