

ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿರುದ್ಧ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂಪಡೆಯಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಕ್ಕೆ ಬಿಜೆಪಿ ಟೀಕಿಸುತ್ತಿರುವುದರ ಕುರಿತು ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಕರ್ನಾಟಕ ಸಚಿವ ಸಂಪುಟದ ನಿರ್ಧಾರದ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರು, ‘‘ಅಂದಿನ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿರುವುದು ಕಾನೂನುಬಾಹಿರ, ಅವರದೇ ಮಾನದಂಡದಂತೆ ಅದು ಈಡೇರಿಲ್ಲ. ಅವರು ಸರ್ಕಾರವನ್ನು ಹೇಗೆ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಕಾಂಗ್ರೆಸ್ ನಾಯಕರನ್ನು ಸಿಬಿಐ, ಐಟಿ ಮತ್ತು ಇಡಿ ಅಡಿಯಲ್ಲಿ ಬಂಧಿಸಿದರು, ಹೇಗೆ ಮಾರ್ಗಸೂಚಿಗಳನ್ನು ತಪ್ಪಾಗಿ ಗ್ರಹಿಸಿದರು ಎಂಬುದರ ಕುರಿತು ನಾನು ವಿವರವಾಗಿ ಮಾತನಾಡಿದ್ದೇನೆ. ಅವರ ಸರ್ಕಾರದ ಅಧಿಕಾರಿಗಳೇ ಎಫ್‌ಐಆರ್ ಇಲ್ಲ ಮತ್ತು ಸಿಬಿಐಗೆ ನೀಡಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. ಹಾಗಾದರೆ, ಅಸ್ಪಷ್ಟತೆ ಎಲ್ಲಿದೆ? ಇದು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ" ಎಂದು ತಿಳಿಸಿದ್ದಾರೆ.
ಬಿಜೆಪಿಯವರು ಎಲ್ಲಾ ಕಡೆ ಸುಳ್ಳು ಸುದ್ದಿ ಕೊಡುತ್ತಿದ್ದಾರೆ. ಇದರಿಂದ ಜನರಲ್ಲಿಯೂ ಸಾಕಷ್ಟು ಗೊಂದಲಗಳಿವೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಅಧಿಕಾರಕ್ಕೆ ಬಂದುಬಿಡುತ್ತೆ ಅಂತ ಇವರು ಈ ಸಂಚನ್ನು ಮಾಡಿದ್ದಾರೆ. ಡಿಕೆಶಿ, ಸಿದ್ದರಾಮಯ್ಯ, ಕಾಂಗ್ರೆಸ್ ಕಟ್ಟಿಹಾಲಿಕ್ಕೆ ಹೀಗೆ ಮಾಡುತ್ತಿದ್ದಾರೆ ಎಂದು ಖರ್ಗೆ ತಿಳಿಸಿದ್ದಾರೆ.