

ಕಲಬುರಗಿ: ಸಮಾಜದಲ್ಲಿ ಅಶಾಂತಿ ಮೂಡಿಸುವವರು, ಇಸ್ಪಿಟ್ ಅಡ್ಡೆ, ಮಟಕಾ ದಂಧೆ ನಡೆಸುವರು, ಅಕ್ಕಿ ಕಳ್ಳ ಸಾಗಣೆ ಮಾಡುವವರು, ಹಲವಾರು ಕ್ರಿಮಿನಲ್ ಕೇಸ್‌ಗಳಿರುವವರೆಲ್ಲರೂ ರಾಮ ಭಕ್ತರೇನು ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಷ್ಟೊಂದು ಕೇಸ್‌ಗಳಿರುವವರು ಹೇಗೆ ಕರ ಸೇವಕರಾಗುತ್ತಾರೆ? ಅವರ ಮೇಲೆ ಕೇಸ್‌ಗಳನ್ನು ಹಾಕಿದ್ದು ನಾವಲ್ಲ. ಈ ಹಿಂದೆ ಅವರ ಪಕ್ಷವೇ ಆಡಳಿತದಲ್ಲಿತ್ತು, ಆಗ ಕೇಸ್ ವಾಪಸ್ ಪಡೆಯಬಹುದಿತ್ತು ಅಲ್ವಾ ? ಆದರೆ ಯಾಕೆ ಹಿಂಪಡೆಯಲಿಲ್ಲ ? ಆಗೇನು ಕತ್ತೆ ಕಾಯುತ್ತಿದ್ದರೇನು ? ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರಿಗೆ ತಿರುಗೇಟು ನೀಡಿದರು.
ನಾನು ಕರಸೇವಕ, ನನ್ನನ್ನು ಬಂಧಿಸಿ ಎಂದು ಕೇವಲ ತೋರಿಕೆಗಾಗಿ ಬಿಜೆಪಿಯವರು ಅಭಿಯಾನ ನಡೆಸುತ್ತಿದ್ದಾರೆ. ಇವರೆಲ್ಲರೂ ಸಂವಿಧಾನ, ಕಾನೂನು ಉಲ್ಲಂಘನೆ ಮಾಡಲಿ ಬಂಧಿಸದೆ ಬಿಡುವುದಿಲ್ಲ ಎಂದು ಕಿಡಿಕಾರಿದರು.
ಸಂಸತ್ತಿನಲ್ಲಿ ದಾಳಿ ಮಾಡಿದವರಿಗೆ ಪಾಸ್ ನೀಡಿದ್ದರ ಕುರಿತು ಸಂಸದ ಪ್ರತಾಪಸಿಂಹ ಪ್ರತಿಕ್ರಿಯಿಸಿ, ತಾಯಿ ಚಾಮುಂಡೇಶ್ವರಿ ಲೀಲೆ' ಎನ್ನುತ್ತಾರೆ. ನಾನು ಚಾಮುಂಡೇಶ್ವರಿ ದೇವಿಯನ್ನು ಕೇಳಿದ್ದೇನೆ,ಪಾಸ್ ಕೊಡಬೇಡ ಎಂದು ಹೇಳಿದ್ದೆ' ಎಂದು ತಾಯಿ ನನಗೆ ತಿಳಿಸಿದ್ದಾಳೆ ಎಂದು ಉತ್ತರಿಸಿ ಸಂಸದ ಪ್ರತಾಪ್ ಅವರನ್ನು ಕಿಚಾಯಿಸಿದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ ಇದ್ದರು.