

ಮಂಗಳೂರು : ಲೋಕಸಭೆ ಚುನಾವಣೆಯ ವೇಳೆಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಖಾಲಿ ಆಗಲಿದೆ. ಬಿಜೆಪಿಯಲ್ಲಿ ನಾಯಕರೇ ಇಲ್ಲ ಎಂದು ನಾಯಕತ್ವ ಅರಸಿ ಕಾಂಗ್ರೆಸ್‌ಗೆ ಬರುತ್ತಿದ್ದಾರೆ. ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ಯಾರು ಬೇಕಾದರೂ ಪಕ್ಷಕ್ಕೆ ಸೇರ್ಪಡೆಯಾಗಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಬುಧವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಪಡೆದ ಬಳಿಕ ಬಿಜೆಪಿ ಅಸಮಾಧಾನ ಬಹಿರಂಗವಾಗಿದೆ. ಸಿ.ಟಿ.ರವಿ, ಯತ್ನಾಳ್, ಸುನಿಲ್ ಕುಮಾರ್ ಸಮಾರಂಭಕ್ಕೆ ಗೈರಾಗಿದ್ದಾರೆ. ಯಡಿಯೂರಪ್ಪ ಅವರನ್ನು ಸಿಎಂ ಗಾದಿಯಿಂದ ಕಣ್ಣೀರು ಹಾಕಿಸಿ ಇಳಿಸಿದ್ದು ಯಾಕೆ ಎಂದು ಯಾರಿಗೂ ಗೊತ್ತಿಲ್ಲ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ, ನಾಯಕತ್ವದ ಕೊರತೆ ಕಾರಣಕ್ಕೆ ಬಿಜೆಪಿ ವರಿಷ್ಠರು ವಿಜಯೇಂದ್ರ ಆಯ್ಕೆ ಮಾಡಿದ್ದಾರೆ ಎಂದರು.
ಬಿಜೆಪಿಯನ್ನು ಗಮನದಲ್ಲಿರಿಸಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಂತ್ರಗಾರಿಕೆ ನಡೆಸುವುದಿಲ್ಲ. ಅಂತಹ ಅನಿವಾರ್ಯತೆಯೂ ಕಾಂಗ್ರೆಸ್‌ಗೆ ಇಲ್ಲ. ರಾಜ್ಯ ಸರ್ಕಾರದ ಗ್ಯಾರಂಟಿ ಹಾಗೂ ಜನಪರ ಯೋಜನೆಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತೇವೆ .ಲಿಂಗಾಯತ ಸಮುದಾಯಕ್ಕೆ ಬಿಜೆಪಿಯಿಂದ ಆದ ನಿರ್ಲಕ್ಷಕ್ಕೆ ಕಾಂಗ್ರೆಸ್ ಆಡಳಿತಕ್ಕೆ ಬಂದಿದೆ ಎನ್ನುವುದು ಸರಿಯಲ್ಲ. ಅದಕ್ಕಿಂತ ಬಿಜೆಪಿ ಸರ್ಕಾರದ ಅವಧಿಯ ಭ್ರಷ್ಟಾಚಾರ,ಬೆಲೆ ಏರಿಕೆ ಮುಂತಾದ ಕಾರಣಗಳಿಂದ ನಾವು ಅಧಿಕಾರಕ್ಕೆ ಬಂದಿದ್ದೇವೆ .ಕಾಂಗ್ರೆಸ್ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದಿದೆ. ಮೇಲ್ಮನೆ, ಕೆಳಮನೆಯಲ್ಲಿ ವಿಪಕ್ಷ ನಾಯಕರಿಲ್ಲ, ಇನ್ನು 15 ದಿನದಲ್ಲಿ ಬೆಳಗಾವಿ ಅಧಿವೇಶನ ಆರಂಭವಾಗುತ್ತದೆ. ವಿರೋಧ ಪಕ್ಷದ ನಾಯಕರು ಯಾರು? ಅಂತಹ ಯಾವುದೇ ನಾಯಕ ಬಿಜೆಪಿಯಲ್ಲಿ ಇಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ಕಚೇರಿ ಗೋಡೆ ಮೇಲೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಪೋಸ್ಟರ್‌ಗೂ ಕಾಂಗ್ರೆಸ್‌ಗೆ ಸಂಬಂಧ ಇಲ್ಲ .ನಾವು ಆಡಳಿತ ನಡೆಸುತ್ತಾ ಇದ್ದೇವೆ. ಹಾಗೆ ಮಾಡಬೇಕು ಎಂದಾದರೆ ಪೇ ಸಿಎಂ ಕ್ಯಾಂಪೇನ್ ಮಾಡಿದಂತೆ ಮಾಡುತ್ತೇವೆ. ಅದೇನು ರಾತ್ರೋ ರಾತ್ರಿ ಹಾಕಿದ್ದಾ? ಎದೆ ತಟ್ಟಿ ಮುಂದೆ ಬಂದು ಬಹಿರಂಗವಾಗಿಯೇ ಭ್ರಷ್ಟಾಚಾರ ಆರೋಪ ಮಾಡುತ್ತೇವೆ. ನಿರಾಧಾರವಾಗಿ ನಾವು ಯಾವುದನ್ನೂ ಮಾಡುವುದಿಲ್ಲ
ಕಾಂಗ್ರೆಸ್‌ನ ಗ್ಯಾರಂಟಿಗಳ ಬಗ್ಗೆ ಕುಮಾರಸ್ವಾಮಿ ಟೀಕೆ ಮಾಡಿದ್ದರು. ಎಲ್ಲರನ್ನೂ ಕತ್ತಲಲ್ಲಿ ಇರಿಸುತ್ತೀರಿ ಎಂದ ಅವರು ಹೆಚ್ಚು ಬೆಳಕು ತಗಳೋದು ಎಷ್ಟು ಸರಿ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
.....................................