

ಧಾರವಾಡ: ಇಲ್ಲಿನ ಎನ್‌ಆರ್‌ಐ ಮಹಿಳೆ ಪ್ರಿಯದರ್ಶಿನಿ ಪಾಟೀಲ ಆತ್ಮಹತ್ಯೆ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ. ಆಸ್ಟ್ರೇಲಿಯಾ ಸರ್ಕಾರ ಸುಪರ್ದಿಗೆ ಪಡೆದಿದ್ದ ಮಕ್ಕಳನ್ನು ಮರಳಿ ಪಡೆಯಲು ಹೋರಾಟ ಮಾಡಿ ಸೋತು ಆತ್ಮಹತ್ಯೆಗೆ ಶರಣಾಗಿದ್ದ ಮಹಿಳೆಯ ಪರ ಗುರುವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ಹೋರಾಟ ನಡೆಯಿತು.
ಧಾರವಾಡದ ಪ್ರಿಯದರ್ಶಿನಿ ಪಾಟೀಲ ಅವರಂತೆ ಭಾರತೀಯ ಎನ್‌ಆರ್‌ಐಗಳ ಮಕ್ಕಳು ಬೇರೆ ಬೇರೆ ದೇಶದಲ್ಲಿ ಸಿಲುಕಿದ್ದಾರೆ. ಆಯಾ ದೇಶಗಳ ಕಠಿಣ ಕಾನೂನಿನಿಂದಾಗಿ ಮಕ್ಕಳು ಪಾಲಕರಿಂದ ದೂರವಾಗಿದ್ದಾರೆ. ಅವರೆಲ್ಲರ ಹೋರಾಟಕ್ಕೆ ಪ್ರಿಯದರ್ಶಿನಿ ಆತ್ಮಹತ್ಯೆ ನಾಂದಿಯಾಗಿದೆ. ನಾರ್ವೇ, ಜರ್ಮನಿ, ಇಂಗ್ಲೆಂಡ್, ಸ್ವೀಡನ್, ಇತರ ದೇಶಗಳ ವಶದಲ್ಲಿರುವ ಮಕ್ಕಳ ಪಾಲಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
ಧಾರವಾಡದ ಪ್ರಿಯದರ್ಶಿನಿ ಪಾಟೀಲ, ಪತಿ ಲಿಂಗರಾಜ ಹಾಗೂ ಇಬ್ಬರು ಮಕ್ಕಳೊಂದಿಗೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿದ್ದರು. ಪುತ್ರನ ಆರೋಗ್ಯದಲ್ಲಿ ಕೊಂಚ ತೊಂದರೆ ಕಾಣಿಸಿಕೊಂಡಿದ್ದರಿಂದ ಪ್ರಿಯದರ್ಶಿನಿ ನೊಂದಿದ್ದರು. ಅಲ್ಲಿನ ಕಾನೂನಿಗೆ ಅನುಗುಣವಾಗಿ ಮಕ್ಕಳನ್ನು ನೋಡಿಕೊಂಡಿಲ್ಲ ಎಂಬ ಆರೋಪದಿಂದ ಸರ್ಕಾರ ಇಬ್ಬರು ಮಕ್ಕಳನ್ನು ಸುಪರ್ದಿಗೆ ಪಡೆದಿತ್ತು. ಆಸ್ಟ್ರೇಲಿಯಾದ ಕಠಿಣ ಕಾನೂನಿಗೆ ಬೇಸತ್ತ ಪ್ರಿಯದರ್ಶಿನಿ ಆ. 18ರಂದು ಹೊರಟು ಬೆಂಗಳೂರಿಗೆ ಬಂದಿದ್ದರು. ಅಲ್ಲಿಂದ ತವರು ಮನೆಗೆ ಹೋಗದೆ, ಸವದತ್ತಿ ಬಳಿಯ ನವಿಲುತೀರ್ಥ ಜಲಾಶಯದ ಹಿನ್ನೀರಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ. 20ರಂದು ಶವ ಪತ್ತೆಯಾಗಿತ್ತು. ಇದಕ್ಕೂ ಮುನ್ನ ಪ್ರಿಯದರ್ಶಿನಿ ತನ್ನ ತಂದೆಗೆ ಬರೆದಿರುವ ಡೆತ್‌ನೋಟ್‌ನಲ್ಲಿ ಸಿಡ್ನಿಯ ಡಿಸಿಜೆ ಹಾಗೂ ನೆರೆಹೊರೆಯ ನಿವಾಸಿಗಳು ಕಿರುಕುಳ ನೀಡುತ್ತಿದ್ದರು ಎಂದು ಉಲ್ಲೇಖಿಸಿದ್ದರು.