ಶಿಕ್ಷಣ ಸಂಸ್ಥೆಗಳ ಮೇಲಿದೆ ಉತ್ಕೃಷ್ಠ ಶಿಕ್ಷಣದ ಜವಾಬ್ದಾರಿ

19 smg 9
Published on

ಶಿವಮೊಗ್ಗ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಉತ್ಕೃಷ್ಠ ಶಿಕ್ಷಣ ಕೊಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಪಾಲಕರ ಕನಸು, ಅಪೇಕ್ಷೆ ಕೂಡ ಅದೇ ಆಗಿದೆ ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಕಲ್ಲಹಳ್ಳಿಯ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದ ಪ್ರತಿ ಹಂತದಲ್ಲೂ ಸ್ಪರ್ಧೆ ಎದುರಿಸುವಂತಾಗಿದೆ. ವಿಶ್ವ ತುಂಬಾ ಚಿಕ್ಕದಾಗಿದ್ದು ಸಣ್ಣದೊಂದು ಮೊಬೈಲ್‌ನಲ್ಲಿ ಎಲ್ಲವನ್ನೂ ಕುಳಿತಲ್ಲೇ ನೋಡುವಂತಾಗಿದೆ. ಕಂಪ್ಯೂಟರ್ ಯುಗದ ಬದಲು ಇಂಟರ್‌ನೆಟ್ 5ಜಿ ಯುಗಕ್ಕೆ ಹೊಂದಿಕೊಳ್ಳಬೇಕಿದೆ ಎಂದರು.

ಪಾಲಕರ ಇಚ್ಛೆಯಂತೆ ಗುಣಮಟ್ಟದ ಶಿಕ್ಷಣ ನೀಡುವುದು ಆಯಾ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಬಹುತೇಕ ಸಂಸ್ಥೆಗಳು ಅದೇ ಕೆಲಸ ಮಾಡುತ್ತಿವೆ. ಪಾಲಕರು ಮಕ್ಕಳ ಸಾಮರ್ಥ್ಯವನ್ನು ಅರಿತುಕೊಳ್ಳಬೇಕಿದೆ. ಯಾವ ಮಕ್ಕಳು ಹುಟ್ಟುವಾಗಲೇ ದಡ್ಡರಾಗಿರಲಿಲ್ಲ. ನಮ್ಮ ಆಸೆ, ಆಕಾಂಕ್ಷೆಗಳನ್ನು ಈಡೇರಿಸಲು ಮಕ್ಕಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಜತೆಗೆ ಇತರೆ ಮಕ್ಕಳೊಂದಿಗೆ ಹೋಲಿಕೆ ಮಾಡುವುದೂ ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

ಮಕ್ಕಳಿಗೆ ಅವರದ್ದೆಯಾದ ಸಾಮರ್ಥ್ಯವಿದೆ. ಅವರ ಬುದ್ಧಿಮತೆ ಗುರುತಿಸಿ ಗುಣಾತ್ಮಕವಾಗಿ ಬೆಳೆಸಬೇಕಾಗುತ್ತದೆ. ಆಗ ಮಾತ್ರ ಮಕ್ಕಳು ಪ್ರಬುದ್ಧರಾಗಲು ಸಾಧ್ಯವಿದೆ. ಕರೊನಾ ಬಳಿಕ ಮಕ್ಕಳು ಮೊಬೈಲ್ ವ್ಯಾಮೋಹ ಹೆಚ್ಚಿಸಿಕೊಂಡಿದ್ದು ಅದರಿಂದ ಹೊರತರುವುದು ಕಷ್ಟದ ಕೆಲಸವಾಗಿದೆ. ಮೊಬೈಲ್ ಚಟ ಬಿಡಿಸಿ ಮುಖ್ಯವಾಹಿನಿಗೆ ಕರೆತರುವುದು ಪಾಲಕರಿಗೂ ಸವಾಲಿನ ಕೆಲಸವಾಗಿದೆ. ಮಕ್ಕಳು ಶೈಕ್ಷಣಿಕ ಕೆಲಸದ ಜತೆಗೆ ಇತರೆ ಚಟುವಟಿಕೆಗಳಲ್ಲೂ ಹೆಚ್ಚಾಗಿ ತೊಡಗಿಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಿಂದಲೇ ತಾಳ್ಮೆಯನ್ನು ಕಲಿಸಬೇಕು ಎಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ಶ್ರೀನಿವಾಸ್, ಪರಿಶಿಷ್ಟ ಕಲ್ಯಾಣ ಇಲಾಖೆಯ ಅಧಿಕಾರಿ ಎಚ್.ಇ.ಅಜ್ಜಪ್ಪ ಮಾತನಾಡಿದರು. ಇದೇ ವೇಳೆ ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್‌ಗಳಾದ ಆಕಾಶ್, ಯಶವಂತ್, ತನುಶ್ರೀ, ಪಿಯುಸಿಯಲ್ಲಿ ಟಾಪರ್‌ಗಳಾದ ಮಂಜುನಾಥ, ಅಮೂಲ್ಯ ಮತ್ತು ಶ್ವೇತಾ ಅವರನ್ನು ಸನ್ಮಾನಿಸಲಾಯಿತು. ಶಾಲೆ ಕಾರ್ಯದರ್ಶಿ ಎನ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಬಿಇಒ ಪಿ.ನಾಗರಾಜ್, ಶಾಲಾ ಪ್ರಾಚಾರ್ಯೆ ಬಿ.ಎಸ್.ಸುನೀತಾ ದೇವಿ, ಪ್ರಿಯದರ್ಶಿನಿ ಪಿಯು ಸ್ವತಂತ್ರ ಕಾಲೇಜಿನ ಪ್ರಾಚಾರ್ಯ ವೀರೇಶ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net