

ಸಿರಗುಪ್ಪ: ಸಾಮಾನ್ಯ ಜನರ ತಲಾ ಆದಾಯವೂ ದ್ವಿಗುಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಹೇಳಿದರು.
ನಗರದ ನೇತಾಜಿ ವ್ಯಾಯಾಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಿಪಿಐಎಂ 13ನೇ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.
ಭಾರತದಲ್ಲಿ ಪೌಷ್ಟಿಕ ಆಹಾರವಿಲ್ಲದೆ ನಿತ್ಯ ಸಾವಿರಾರು ಜನರು ಸಾಯುತ್ತಿದ್ದಾರೆ. ಮಹಿಳೆಯರು ರಕ್ತ ಹೀನತೆಯಿಂದ ಬಳಲುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡುವ ಪಡಿತರ ಧಾನ್ಯವನ್ನು 80 ಕೋಟಿ ನಾಗರಿಕರು ಸೇವಿಸಿ ಬದುಕುತ್ತಿದ್ದಾರೆ.
ಕೂಲಿಕಾರರು, ಕಾರ್ಮಿಕರಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಅಪೌಷ್ಟಿಕತೆ ಹೋಗಲಾಡಿಸುವ ಅಗತ್ಯವಿದೆ ಎಂದ ಅವರು, ಹಳ್ಳಿಗಳಲ್ಲಿ ಜಿಗಣಿಯಂತೆ ನುಗ್ಗುವ ಮೈಕ್ರೋಫೈನಾನ್ಸ್, ಖಾಸಗೀಕರಣ ನೀತಿಗಳ ವಿರುದ್ಧ ನಿರಂತರ ಹೋರಾಟ ನಡೆಸಲಿದೆ ಎಂದರು.
ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ವೈ.ಎಸ್ ಗುರುಶಾಂತ, ಆರ್.ಎಸ್ ಬಸವರಾಜ ಮಾತನಾಡಿದರು. ಪಕ್ಷದ ಜಿಲ್ಲಾ ಕಾರ್ಯದರ್ಶಿ ಜೆ.ಸತ್ಯಬಾಬು, ಸದಸ್ಯರಾದ ಬಿ.ಓಬಳೇಶಪ್ಪ, ಚಂದ್ರಕುಮಾರಿ ಎಸ್., ಶಿವಶಂಕರ ಜೆ., ಚನ್ನಬಸಯ್ಯಸ್ವಾಮಿ, ತಾಲೂಕು ಸಂಘಟನಾ ಕಾರ್ಯದರ್ಶಿ ಎಚ್ ತಿಪ್ಪಯ್ಯ, ತಾಲೂಕು ಸಮಿತಿ ಸದಸ್ಯರಾದ ಬಿ ಎಲ್ ಈರಣ್ಣ, ವಿ.ಮಾರುತಿ ಇತರರಿದ್ದರು.