

ಬೆಂಗಳೂರು: ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಖಾಸಗಿ ಕಂಪನಿಗಳು ಮುಂದೆಬಂದಿದ್ದು, ಸರ್ಕಾರ ಕೂಡ ಆ ದಿಕ್ಕಿನತ್ತ ಒಲವು ವ್ಯಕ್ತಪಡಿಸಿದೆ. ಖಾಸಗಿಯವರಿಗೆ ವಹಿಸಿದರೆ ಸುಸೂತ್ರವಾಗಿ ಘಟಕಗಳು ಕಾರ್ಯನಿರ್ವಹಿಸುತ್ತವೆ, ಬಂಡವಾಳ ಇಲ್ಲದೆ ಎಲ್ಲ ಕಡೆ ಘಟಕ ಸ್ಥಾಪಿಸಬಹುದು ಎಂಬ ಲೆಕ್ಕಾಚಾರದಲ್ಲಿ ಸರ್ಕಾರವಿದೆ.
ಸುದ್ದಿಗಾರರೊಂದಿಗೆ ಈ ವಿಚಾರವಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಭೂಮಿ, ನೀರಿನ ಮೂಲ, ವಿದ್ಯುತ್ತನ್ನ ಸರ್ಕಾರ ಉಚಿತವಾಗಿ ನೀಡಿದರೆ, ಆರ್ಒ ಘಟಕ ಸ್ಥಾಪಿಸಿ ನೀರನ್ನು ವಿತರಿಸಲು ನಾವು ಸಿದ್ಧ ಎಂದು 2 ಖಾಸಗಿ ಕಂಪನಿಗಳು ಮುಂದೆಬಂದಿವೆ. ಈ ಬಗ್ಗೆ ಶೀಘ್ರವೇ ತೀರ್ಮಾನ ಮಾಡಲಾಗುತ್ತದೆ ಎಂದರು.
ಸರ್ಕಾರ ಈಗ ಅನುಷ್ಠಾನ ಮಾಡಿರುವ ಆರ್ಒ ಘಟಕಗಳಲ್ಲಿ ಜನರಿಂದ ಸಂಗ್ರಹಿಸುವ ಶುಲ್ಕದಂತೆಯೇ ಖಾಸಗಿಯವರಿಂದ ಸ್ಥಾಪನೆಯಾಗುವ ಘಟಕದಲ್ಲೂ ಶುಲ್ಕ ಸಂಗ್ರಹಿಸುವ ವ್ಯವಸ್ಥೆ ಇರುತ್ತದೆ. ಆದರೆ, ಶುಲ್ಕ ನಿಗದಿ ಸರ್ಕಾರದ ನಿಯಂತ್ರಣದಲ್ಲಿರಲಿದೆ ಎಂದು ವಿವರಿಸಿದರು.
ಅಕ್ರಮ ತನಿಖೆಗೆ: ಹಾಲಿ ಅನುಷ್ಠಾನದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಅಕ್ರಮ ಆಗಿರುವ ಬಗ್ಗೆ ದೂರುಗಳಿವೆ. ಕಾರ್ಯನಿರ್ವಹಣೆ ಯಲ್ಲಿರುವ ಘಟಕಗಳ ಬಗ್ಗೆ ಸ್ಪಷ್ಟ ಅಂಕಿ ಅಂಶಗಳಿಲ್ಲ. ಹೀಗಾಗಿ ತನಿಖೆ ನಡೆಸಿ ವರದಿ ಪಡೆದುಕೊಳ್ಳಲಾಗುತ್ತಿದೆ ಎಂದು ಈಶ್ವರಪ್ಪ ತಿಳಿಸಿದರು.
ಮನೆ ಮನೆಗೆ ಗಂಗೆ: ಪ್ರತಿ ಮನೆಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಮನೆ ಮನೆಗೆ ಗಂಗೆ ಯೋಜನೆ ರೂಪುರೇಷೆ ಇನ್ನೊಂದು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದರು. ಕೇಂದ್ರ ಸರ್ಕಾರ ಯೋಜನೆಗೆ ಹಣ ನೀಡುತ್ತಿದ್ದು, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಗ್ರಾಮಗಳವರೆಗೆ ಬಂದ ನೀರನ್ನು ಪ್ರತಿ ಮನೆಗೂ ನಲ್ಲಿ ಮೂಲಕ ತಲುಪಿಸಲಾಗುತ್ತದೆ ಎಂದು ವಿವರಿಸಿದರು.