2ನೇ ದಿನವೂ ಜಿಲ್ಲೆಗೆ ಬಂದ್ ಬಿಸಿ, ಸಾರಿಗೆ ಸಮರಕ್ಕೆ ಜನ ಹೈರಾಣ, ಖಾಸಗಿ ವಾಹನಗಳೇ ಆಸರೆ

12 Nela Ph 04 Bus Stand
Published on

ಬೆಂಗಳೂರು ಗ್ರಾಮಾಂತರ: ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕೆಂಬ ಸಾರಿಗೆ ಸಿಬ್ಬಂದಿ ಹೋರಾಟದಿಂದಾಗಿ ಶನಿವಾರವೂ ಪ್ರಯಾಣಿಕರ ಪರದಾಟ ಮುಂದುವರಿಯಿತು.

ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ಖಾಸಗಿ ಬಸ್, ಆಟೋ, ಟ್ಯಾಕ್ಸಿ ಹಾಗೂ ಸರಕು ಸಾಗಣೆ ವಾಹನಗಳ ಮೊರೆ ಹೋಗಿದ್ದರು. ಬೆಂಗಳೂರು ಮತ್ತಿತರ ಕಡೆ ಹೊರಡಲು ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ತಾಸುಗಟ್ಟಲೆ ಕಾದು ಮನೆಗೆ ಮರಳಿದರು.

ಖಾಸಗಿ ಟ್ಯಾಕ್ಸಿ, ಆಟೋ ಚಾಲಕರಿಗೆ ಸಾರಿಗೆ ಬಂದ್‌ನಿಂದಾಗಿ ಒಂದಷ್ಟು ಆದಾಯ ಹೆಚ್ಚಳವಾಗಿದೆ. ಕೆಲವೊಂದು ಕಡೆ ಟ್ಯಾಕ್ಸಿ, ಆಟೋದವರು ಹೆಚ್ಚಿನ ದರಕ್ಕೆ ಡಿಮಾಂಡ್ ಮಾಡುತ್ತಿರುವ ಆರೋಪ ಕೇಳಿಬಂದಿದ್ದರೆ ಖಾಸಗಿ ಬಸ್‌ಗಳಲ್ಲಿ ಏಕಾಏಕಿ ಟಿಕೆಟ್ ದರ ಹೆಚ್ಚಿಸಲಾಗಿದೆ ಎಂಬ ದೂರು ವ್ಯಕ್ತವಾಗಿದೆ. 2ನೇ ಶನಿವಾರವಾದ್ದರಿಂದ ಸರ್ಕಾರಿ ಕಚೇರಿಗಳಿಗೆ ರಜೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ಬಂದ್ ಬಿಸಿ ತಟ್ಟಿಲ್ಲ.

ಬಂಧನಕ್ಕೆ ಖಂಡನೆ: ಸಾರಿಗೆ ನೌಕರರು ಶುಕ್ರವಾರ ವಿಧಾನಸೌಧ ಮುತ್ತಿಗೆಗೆ ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ನೌಕರರ ಬಂಧನ ಖಂಡಿಸಿ ಶನಿವಾರ ಎಲ್ಲ ನಿಗಮಗಳ ನೌಕರರು ಬಂದ್‌ಗೆ ಕರೆ ನೀಡಿದ್ದರು. ನೌಕರರ ಬಂಧನ ಹಾಗೂ ಹೋರಾಟ ಹತ್ತಿಕ್ಕುತ್ತಿರುವ ಸರ್ಕಾರದ ಕ್ರಮದ ವಿರುದ್ಧ ೋಷಣೆ ಕೂಗಲಾಯಿತು.

ಕರೊನಾ ಲಾಕ್‌ಡೌನ್ ತೆರವು ಬಳಿಕ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಹಂತಹಂತವಾಗಿ ಸಾರಿಗೆ ವ್ಯವಸ್ಥೆ ಪುನಾರಂಭಿಸಿದ್ದೆವು. 94 ಮಾರ್ಗಗಳ ಪೈಕಿ 80 ಮಾರ್ಗಗಳಲ್ಲಿ ಸಂಚಾರ ಆರಂಭಿಸಲಾಗಿತ್ತು. ಶನಿವಾರ ಬೆಳಗ್ಗೆ ಬೆಂಗಳೂರಿಗೆ 4 ಬಸ್ ಆಪರೇಟ್ ಮಾಡಲಾಗಿದೆ. ಆದರೆ ಉಳಿದವರು ಕರ್ತವ್ಯಕ್ಕೆ ಹಾಜರಾಗಿಲ್ಲ. ಅವರಿಗೆ ಕರೆ ಮಾಡಿ ಕೆಲಸಕ್ಕೆ ಹಾಜರಾಗುವಂತೆ ಸೂಚಿಸಿದ್ದೇವೆ. ಆನಂದ್, ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ 2 ದಿನದ ಹಿಂದೆ ಸಂಬಂಧಿಕರ ಮದುವೆಗೆ ನಗರಕ್ಕೆ ಬಂದಿದ್ದೆ. ಹಳ್ಳಿಯಲ್ಲಿ ಜಾನುವಾರುಗಳನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ನೌಕರರ ಮುಷ್ಕರದಿಂದ ಮೂಕ ಪ್ರಾಣಿಗಳಿಗೂ ತೊಂದರೆಯಾಗಿದೆ. ಖಾಸಗಿ ವಾಹನಗಳ ಚಾಲಕರು ಕೇಳುವ ದುಪ್ಪಟ್ಟು ಹಣಕೊಟ್ಟು ಗ್ರಾಮಕ್ಕೆ ತೆರಳಬೇಕಾಯಿತು. ಭದ್ರಯ್ಯ ಮೋಟಗಾನಹಳ್ಳಿ ನೌಕರರ ಮುಷ್ಕರದಿಂದ ನಿಲ್ದಾಣದಲ್ಲಿ ಪ್ರಯಾಣಿಕರು ಇಲ್ಲ. ರಾಜ್ಯಸಾರಿಗೆ ಇಲಾಖೆಗೆ ಸೇರಿದ ಕಟ್ಟಡದಲ್ಲಿನ ಅಂಗಡಿ ಹೊಟೇಲ್‌ಗಳಿಗೆ ಬೀಗಬಿದ್ದಿದ್ದು ನಷ್ಟವಾಗಿದೆ. ಡಿಪೋಗೆ ಬಾಡಿಗೆ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸರ್ಕಾರ ಅಗತ್ಯ ಕ್ರಮಕೈಗೊಳ್ಳಬೇಕು. ಎನ್.ಗಣೇಶ್, ನೆಲಮಂಗಲ ಬಸ್ ನಿಲ್ದಾಣದ ಅಂಗಡಿ ಮಳಿಗೆ ಮಾಲೀಕ ಬಂದ್ ಹಿನ್ನೆಲೆಯಲ್ಲಿ ಬಿಎಂಟಿಸಿ ಬಸ್ ಇಲ್ಲದೆ ಖಾಸಗಿ ಬಸ್ ಮೂಲಕ ಕೆಲಸಕ್ಕೆ ತೆರಳುತ್ತಿದ್ದೇನೆ. ಮಾಸಿಕ ಪಾಸ್ ಮಾಡಿಸಿಕೊಂಡಿದ್ದರೂ ಖಾಸಗಿ ಬಸ್‌ನಲ್ಲಿ ಹಣ ನೀಡಿ ಪ್ರಯಾಣಿಸುವ ಪರಿಸ್ಥಿತಿ ಎದುರಾಗಿದೆ. ಮಂಜುನಾಥ್, ಕಾರ್ಮಿಕ, ನೆಲಮಂಗಲ ಸರ್ಕಾರ ಹಗಲಿರುಳು ದುಡಿಯುತ್ತಿರುವ ಸಾರಿಗೆ ನೌಕರರನ್ನು ಸರ್ಕಾರಿ ನೌಕರರಂತೆ ಪರಿಗಣಿಸಿದಲ್ಲಿ ಲಕ್ಷಾಂತರ ಮಂದಿ ಸಾರಿಗೆ ನೌಕರರಿಗೆ ಅನುಕೂಲವಾಗಲಿದೆ. ಆದ್ದರಿಂದ ಕೂಡಲೇ ಬೇಡಿಕೆ ಈಡೇರಿಸಬೇಕು. ಹೆಸರು ಹೇಳಲಿಚ್ಛಿಸದ ರಾಜ್ಯಸಾರಿಗೆ ಚಾಲಕ

ಮಾಹಿತಿ ಕೇಂದ್ರವಾದ ಸಾರಿಗೆ ನಿಯಂತ್ರಕರ ಕಚೇರಿ: ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರಿಂದ ಬೇರೆ ಊರುಗಳಿಗೆ ತೆರಳಲೆಂದು ವಿಜಯಪುರದ ಬಸ್ ನಿಲ್ದಾಣಕ್ಕೆ ಬಂದಿದ್ದ ಜನರು ಬಸ್ ಯಾವಾಗ ಬರುತ್ತೆ? ಬಸ್‌ಗಳ ಸಂಚಾರ ಪುನರಾರಂಭ ಯಾವಾಗ ಆಗುತ್ತದೆ? ಪರ್ಯಾಯ ವ್ಯವಸ್ಥೆ ಏನಾದರೂ ಮಾಡುವಿರಾ ಎಂಬುದು ಸೇರಿ ಹಲವು ಪ್ರಶ್ನೆಗಳೊಂದಿಗೆ ಸಾರಿಗೆ ನಿಯಂತ್ರಕರ ಕೊಠಡಿಗೆ ಎಡತಾಕಲಾರಂಭಿಸಿದರು. ಕೆಲವರು ಕೋಲಾರ, ಚಿಕ್ಕಬಳ್ಳಾಪುರದಿಂದ ಬಸ್‌ಗಳು ಬರುತ್ತವೆಯೇ ಎಂಬ ಪ್ರಶ್ನೆಯೊಂದಿಗೆ ಅವರನ್ನು ಸಂಪರ್ಕಿಸುತ್ತಿದ್ದರು. ಇದರಿಂದಾಗಿ ಸಾರಿಗೆ ನಿಯಂತ್ರಕರ ಕಚೇರಿ ಮಾಹಿತಿ ಕೇಂದ್ರವಾಗಿ ಮಾರ್ಪಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net