ಶಕ್ತಿ ಯೋಜನೆಯಿಂದ ಖಾಸಗಿ ವಾಹನ ಮಾಲೀಕರಿಗೆ ಪೆಟ್ಟು

LXR PRIVATE VACHICLE
ಲಕ್ಷ್ಮೇಶ್ವರದ ಬಸ್ ನಿಲ್ದಾಣಕ್ಕೆ ಹೊಂದಿಕೊಂಡಿರುವ ಟೆಂಪೋ ನಿಲ್ದಾಣದಲ್ಲಿ ಪ್ರಯಾಣಿಕರಿಲ್ಲದೆ ನಿಂತಿರುವ ವಾಹನಗಳು.
Published on

ಲಕ್ಷ್ಮೇಶ್ವರ: ಮಹಿಳೆಯರ ಉಚಿತ ಬಸ್ ಪ್ರಯಾಣದಿಂದಾಗಿ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ವಾಹನಗಳ ಮಾಲೀಕರು, ಸಿಬ್ಬಂದಿ ಹಾಗೂ ಅವರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ.

ಬಸ್‌ಗಳಿಗಿಂತ ಕಡಿಮೆ ಪ್ರಯಾಣ ದರದಲ್ಲಿ ಖಾಸಗಿ ವಾಹನಗಳ ಸೇವೆ ಒದಗಿಸುತ್ತಿದ್ದ ಮತ್ತು ಬಸ್‌ಗಳ ಸಮರ್ಪಕ ಸೇವೆ ಇಲ್ಲದ ಮಾರ್ಗದಲ್ಲಿ ಜನರು ಖಾಸಗಿ ವಾಹನಗಳನ್ನು ನೆಚ್ಚಿಕೊಂಡಿದ್ದರು. ಈಗ ಮಹಿಳೆಯರು ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಹೀಗಾಗಿ ಖಾಸಗಿ ಬಸ್, ಟೆಂಪೋ, ಕ್ರೂಸರ್ ಜತೆಗೆ ಆಟೋ ರಿಕ್ಷಾ ಚಾಲಕರಿಗೂ ಶಕ್ತಿ ಯೋಜನೆಯ ಬಿಸಿತಟ್ಟಿದೆ.

ಲಕ್ಷ್ಮೇಶ್ವರದಿಂದ ಗದಗ, ಹುಬ್ಬಳ್ಳಿ, ಗುತ್ತಲ, ಹುಲಗೂರ, ಸವಣೂರ, ಶಿಗ್ಲಿ, ಸೂರಣಗಿ, ಬಾಲೆಹೊಸೂರ ಮಾರ್ಗಗಳಿಗೆ ಖಾಸಗಿ ವಾಹನಗಳು ಸಂಚಾರ ಮಾಡುತ್ತಿದ್ದವು. ತಾಲೂಕಿನಲ್ಲಿ 50ಕ್ಕೂ ಹೆಚ್ಚು ಖಾಸಗಿ ವಾಹನಗಳಿವೆ. ಹಿಂದಿನಿಂದಲೂ ಸಾರಿಗೆ ಸಂಸ್ಥೆಗೆ ಪೂರಕವಾಗಿಯೇ ಖಾಸಗಿ ವಾಹನದವರು ಕಾರ್ಯನಿರ್ವಹಿಸಿ ಬದುಕು ಕಟ್ಟಿಕೊಂಡಿದ್ದಾರೆ. ಆದರೆ, ಸರ್ಕಾರಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಆರಂಭಿಸಿರುವುದು ಖಾಸಗಿ ಸಾರಿಗೆಗೆ ದೊಡ್ಡ ಪೆಟ್ಟು ನೀಡಿದೆ. ಖಾಸಗಿ ವಾಹನಗಳತ್ತ ಯಾರೂ ಮುಖ ಮಾಡುತ್ತಿಲ್ಲ. ಗಂಟೆಗಟ್ಟಲೇ ಕಾಯ್ದು ಬಸ್‌ಗಳಲ್ಲಿಯೇ ಪ್ರಯಾಣಿಸುತ್ತಿದ್ದಾರೆ. ಅನಿವಾರ್ಯ ಸಂದರ್ಭದಲ್ಲಿ ಬರುವ ಮೂರ್ನಾಲ್ಕು ಪ್ರಯಾಣಿಕರಿಗಾಗಿ ವಾಹನ ಓಡಿಸುವುದು ನಷ್ಟವಾಗುತ್ತದೆ.

ಬದುಕು ಬೀದಿಗೆ?: ಖಾಸಗಿ ವಾಹನಗಳನ್ನೇ ನಂಬಿಕೊಂಡು ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿವೆ. ಬ್ಯಾಂಕಿನ ಸಾಲ, ನಿರ್ವಹಣೆಗಾಗಿ ಖಾಸಗಿಯವರಿಂದ ಬಡ್ಡಿ ಸಾಲ ಪಡೆದು ದಿನದ ದುಡಿಮೆಯಿಂದ ಸಾಲದ ಕಂತು ಕಟ್ಟಿ ಜೀವನ ನಡೆಸುವವರೇ ಹೆಚ್ಚು. ಏಕಾಏಕಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದರಿಂದ ಸಾಲ ಮರುಪಾವತಿ, ಜೀವನ ನಿರ್ವಹಣೆಗೆ ದಿಕ್ಕು ತೋಚದಂತಾಗಿದೆ. ಸರ್ಕಾರ ಉಚಿತ ಬಸ್ ಸೇವೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಣೆ ಮಾಡಬೇಕು ಅಥವಾ ನಷ್ಟ ಭರ್ತಿ ಮಾಡಿಕೊಡಬೇಕು ಎಂಬುದು ಖಾಸಗಿ ಬಸ್ ಮಾಲೀಕರ ಪ್ರಮುಖ ಬೇಡಿಕೆಯಾಗಿದೆ.

ಖಾಸಗಿ ಬಸ್ ಮಾಲೀಕರು ವಾಹನಗಳ ಖರೀದಿಗೆ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದಾರೆ. ಅದರ ಕಂತು ತುಂಬಬೇಕು. ವಿಮೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ (16,000 ರೂ.) ರೋಡ್ ಟ್ಯಾಕ್ಸ್ ಕಟ್ಟಬೇಕು. ಟ್ಯಾಕ್ಸ್ ಕಟ್ಟುವುದು ಒಂದು ದಿನ ತಡವಾದರೂ ಶೇ. 20ರಷ್ಟು ದಂಡ (3000 ರೂ.) ವಿಧಿಸಲಾಗುತ್ತದೆ. ಚಾಲಕರು, ಕ್ಲೀನರ್‌ಗಳ ವೇತನ, ವಾಹನಗಳ ರಿಪೇರಿ, ನಿರ್ವಹಣೆ ಸೇರಿ ಅನೇಕ ಖರ್ಚುಗಳಿವೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಉಚಿತ ಬಸ್ ಸೇವೆ ನೀಡುವ ಶಕ್ತಿ ಯೋಜನೆಯು ನಮ್ಮ ಬದುಕನ್ನೇ ಬಲಿ ಪಡೆದುಕೊಂಡಿದೆ. ಸರ್ಕಾರ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ಟೆಂಪೋ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಬಸಣ್ಣ ಬೆಂಗಳೂರು ಹಾಗೂ ಪದಾಧಿಕಾರಿಗಳಾದ ಜಗ್ಗಪ್ಪ ಕೋಲಕಾರ, ಫಕೀರೇಶ ಅಣ್ಣಿಗೇರಿ, ಸುರೇಶ ಏಳುಮಗ್ಗದ, ಶಂಕರಪ್ಪ ಸಜ್ಜನ, ಬಸವರಾಜ ಅಮ್ಮಿನಬಾವಿಮಠ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net