

ಬೆಂಗಳೂರು: ಕರೊನಾ ಚಿಕಿತ್ಸೆ ನೀಡುತ್ತಿರುವ ಸರ್ಕಾರಿ ಆಸ್ಪತ್ರೆಗಳು ಹೌಸ್ಫುಲ್ ಆಗಿರುವ ಪರಿಣಾಮ ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ರಾಜ್ಯ ಸರ್ಕಾರ ಗುರುತಿಸಿದ ಖಾಸಗಿ ಆಸ್ಪತ್ರೆಗಳಿಂದ ಸರಿಯಾದ ಸ್ಪಂದನೆಯೇ ದೊರಕುತ್ತಿಲ್ಲ. ಕೋವಿಡ್ ರೋಗಿಗಳ ಉಚಿತ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳ ಜತೆಗೆ ಕೆಲವು ಖಾಸಗಿ ಆಸ್ಪತ್ರೆಗಳನ್ನು ಗುರುತಿಸಿ ಸರ್ಕಾರ ಶೇ. 50 ಹಾಸಿಗೆ ಕಾಯ್ದಿರಿಸಿದೆ. ಈ ಷರತ್ತಿಗೆ ಖಾಸಗಿ ಆಸ್ಪತ್ರೆಗಳು ಒಪ್ಪಿವೆಯಾದರೂ ಚಿಕಿತ್ಸೆ ನೀಡುವ ವಿಚಾರದಲ್ಲಿ ಮಾತ್ರ ಕೊಟ್ಟ ಮಾತು ಮರೆತಿವೆ. ಸೋಂಕಿತರು ಎಸ್ಆರ್ಎಫ್ ಸಂಖ್ಯೆ ಅಥವಾ ಪಾಸಿಟಿವ್ ವರದಿ ಹಾಜರುಪಡಿಸಿ ಆಸ್ಪತ್ರೆಗೆ ದಾಖಲಾಗಬಹುದು ಎಂದು ಸರ್ಕಾರ ತಿಳಿಸಿದೆ. ಸರ್ಕಾರ ನೀಡಿರುವ ದೂರವಾಣಿ ಸಂಖ್ಯೆಗಳಿಗೆ ವಿಜಯವಾಣಿ ಪ್ರತಿನಿಧಿಗಳು ಜನಸಾಮಾನ್ಯರ ರೀತಿ ಕರೆ ಮಾಡಿದಾಗ ವ್ಯವಸ್ಥೆಯಲ್ಲಿನ ಲೋಪಗಳು ಬಹಿರಂಗಗೊಂಡವೆ.
ಸರ್ಕಾರ ಪ್ರಕಟಿಸಿರುವ 73ರ ಪೈಕಿ 20ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಕರೆ ಮಾಡಿ ವಿಚಾರಿಸಿದಾಗ ಜನಸಾಮಾನ್ಯರಿಗೆ ಚಿಕಿತ್ಸೆ ಲಭಿಸುವ ಯಾವುದೇ ಭರವಸೆ ಸಿಕ್ಕಿಲ್ಲ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಬಗ್ಗೆ ಬೇಸರಗೊಂಡು ಹಣ ತೆತ್ತಾದರೂ ಖಾಸಗಿಯಲ್ಲಿ ಚಿಕಿತ್ಸೆ ಪಡೆಯೋಣ ಎಂದುಕೊಳ್ಳುತ್ತಿದ್ದ ಸೋಂಕಿತರಿಗೆ ಭ್ರಮನಿರಸನವಾಗಿದೆ.
ಹಾಸಿಗೆ ಇಲ್ಲ, ಬೇರೆ ಕಡೆ ಪ್ರಯತ್ನಿಸಿ
ರೋಗ ಲಕ್ಷಣ ಹೊಂದಿರುವವರು ಹಾಗೂ ಸೋಂಕು ಪರೀಕ್ಷೆಗೆ ಒಳಪಟ್ಟವರಿಗೆ ಚಿಕಿತ್ಸೆ ಲಭ್ಯತೆ ಪರೀಕ್ಷಿಸಲು ಖಾಸಗಿ ಆಸ್ಪತ್ರೆಗಳಿಗೆ ಕರೆ ಮಾಡಲಾಗಿತ್ತು. ಬಹಳಷ್ಟು ಆಸ್ಪತ್ರೆಗಳಲ್ಲಿ ಕರೆಗಳನ್ನು ಸ್ವೀಕರಿಸುವವರೇ ಇಲ್ಲವಾದರೆ ಇನ್ನೂ ಅನೇಕ ಆಸ್ಪತ್ರೆಗಳ ದೂರವಾಣಿ ಸಂಖ್ಯೆಯೇ ಅಸ್ತಿತ್ವದಲ್ಲಿಲ್ಲ ಎಂಬ ಉತ್ತರ ಲಭಿಸಿತು. ಕೆಲವೇ ಆಸ್ಪತ್ರೆಗಳು ಕರೆ ಸ್ವೀಕರಿಸಿದಾಗ, ತೀವ್ರ ರೋಗ ಲಕ್ಷಣದಿಂದ ಬಳಲುತ್ತಿರುವ ಬಂಧುವಿಗೆ ಚಿಕಿತ್ಸೆ ನೀಡಬಹುದೇ ಎಂದು ಕೇಳಲಾಯಿತು. ತೀವ್ರ ರೋಗ ಲಕ್ಷಣ ಹೊಂದಿದ್ದವರನ್ನು ಪ್ರಯೋಗಾಲಯ ವರದಿ ಇಲ್ಲದೆ ದಾಖಲಿಸಿಕೊಳ್ಳಬೇಕೆಂದು ಸರ್ಕಾರ ಸೂಚಿಸಿದ್ದರೂ ‘ಮೊದಲು ಫೀವರ್ ಕ್ಲಿನಿಕ್ನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಿ, ವರದಿ ಬಂದ ನಂತರ ಕರೆ ಮಾಡಿ’ ಎಂದರು. ಇನ್ನೂ ಕೆಲ ಆಸ್ಪತ್ರೆಗಳಲ್ಲಿ ‘ನಮ್ಮಲ್ಲಿ ಹಾಸಿಗೆ ಖಾಲಿ ಇಲ್ಲ. ಬೇರೆ ಕಡೆ ಸಂರ್ಪಸಿ’ ಎಂಬ ಉತ್ತರ ಬಂತು.
ನಮ್ಮವರಿಗೇ ಮೀಸಲು!
ಮೂರು ಆಸ್ಪತ್ರೆಗಳಲ್ಲಿ ‘ನಮ್ಮ ಸಿಬ್ಬಂದಿಗೇ ಬೆಡ್ಗಳ ಅವಶ್ಯಕತೆಯಿದೆ’ ಎಂಬ ಉತ್ತರ ಕೆಲ ಆಸ್ಪತ್ರೆಗಳಿಂದ ದೊರೆಯಿತು. ಶೇ.50 ಹಾಸಿಗೆ ಮೀಸಲಿಡಲಾಗಿದೆಯಲ್ಲ ಎಂಬ ಪ್ರಶ್ನೆಗೆ, ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇದೆ ಎಂದಷ್ಟೇ ಹೇಳಿ ಸುಮ್ಮನಾದರು.
ಅಧಿಕಾರಿಗಳ ಸ್ಪಂದನೆ
ಖಾಸಗಿ ಆಸ್ಪತ್ರೆಗಳಲ್ಲಿ ಎದುರಾಗುವ ಚಿಕಿತ್ಸೆ ಸಮಸ್ಯೆ ಬಗೆಹರಿಸಿ ಕೊಳ್ಳುವುದಕ್ಕಾಗಿಯೇ ಸರ್ಕಾರ ಪ್ರತಿ ಆಸ್ಪತ್ರೆಗಳಲ್ಲಿ ತಲಾ ಇಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದೆ. ಬೆಸ್ಕಾಂ ಹಾಗೂ ಜಲಮಂಡಳಿ ಸಿಬ್ಬಂದಿಗೆ ಈ ಹೊಣೆ ನೀಡಲಾಗಿದೆ. ಇವರಿಗೆ ಕರೆ ಮಾಡಿದಾಗ ‘ಕೆಲವೊಂದು ಆಸ್ಪತ್ರೆಗಳಲ್ಲಿ ಕಡಿಮೆ ಬೆಡ್ಗಳಿವೆ. ಇನ್ನಷ್ಟು ಸಿದ್ಧತೆ ನಡೆಯುತ್ತಿದೆ’ ಎಂಬ ಉತ್ತರ ಹಲವರಿಂದ ದೊರೆಯಿತು. ಮತ್ತೆ ಕೆಲವರು, ರೋಗಿಯನ್ನು ಆಸ್ಪತ್ರೆ ಬಳಿ ಕರೆತನ್ನಿ, ನಾವು ಆಗಮಿಸಿ ಸಮಸ್ಯೆ ಸರಿಪಡಿಸುತ್ತೇವೆ ಎಂದರು. ಇನ್ನು ಕೆಲವರು ಆಸ್ಪತ್ರೆಗೆ ಕರೆ ಮಾಡಿ ವಿಚಾರಿಸಿ ಮತ್ತೆ ತಿಳಿಸುತ್ತೇವೆ ಎಂದರು.
| ಕೆ.ಎಂ.ಪಂಕಜ