

ಚಿಕ್ಕಮಗಳೂರು: ರಾಜ್ಯದಲ್ಲಿರುವ ಖಾಸಗಿ ಶಾಲಾ ಶಿಕ್ಷಕರ ಇಂದಿನ ಪರಿಸ್ಥಿತಿ ಶೋಚನೀಯವಾಗಿದ್ದು ಅತ್ಯಂತ ದುರ್ಬಲ ವರ್ಗ ಎಂದರೆ ಶಿಕ್ಷಕರು ಎಂದು ಕರ್ನಾಟಕ ಖಾಸಗಿ ಶಿಕ್ಷಕರ ಬಳಗದ ರಾಜ್ಯಾಧ್ಯಕ್ಷ ಸಿ.ಎನ್.ನಾಗೇಶ್ ಕಳವಳ ವ್ಯಕ್ತಪಡಿಸಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಜಿಲ್ಲಾ ಖಾಸಗಿ ಶಿಕ್ಷಕರು ಮತ್ತು ಉಪನ್ಯಾಸಕರ ಒಕ್ಕೂಟ ಶುಕ್ರವಾರ ಹಮ್ಮಿಕೊಂಡಿದ್ದ ಸಭೆ ಉದ್ಘಾಟಿಸಿ ಮಾತನಾಡಿದರು.
ಸರ್ಕಾರಕ್ಕೆ ಕಾಳಜಿ ಇಲ್ಲ
ಸರ್ಕಾರವಾಗಲಿ, ಕೆಲಸ ಕೊಟ್ಟ ಖಾಸಗಿ ಸಂಸ್ಥೆಗಳಾಗಲಿ ನಮ್ಮ ಬಗ್ಗೆ ಕಿಂಚಿತ್ತೂ ಕಾಳಜಿ ತೋರಿಸುತ್ತಿಲ್ಲ. ಇರುವವರೆಗೂ ನಮ್ಮ ಕೈಯಲ್ಲಿ ದುಡಿಸಿಕೊಂಡು ಇಂದು ಬೀದಿಗೆ ತಳ್ಳಿದ್ದಾರೆ. ಈ ಬಗ್ಗೆ ಗಮನಹರಿಸಿ ರಾಜ್ಯದಲ್ಲಿ ಖಾಸಗಿ ಶಿಕ್ಷಕರಿಗೆ ಯಾವುದಾದರೂ ಒಂದು ಪರಿಹಾರ ಕಲ್ಪಿಸಿ ಎಂದು ಧ್ವನಿ ಎತ್ತಿ ಸರ್ಕಾರ ಮತ್ತು ಶಿಕ್ಷಣ ಸಚಿವರು, ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳಾದಿಯಾಗಿ ಬಹಳಷ್ಟು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ವಿಧಾನ ಪರಿಷತ್ ಚುನಾವಣೆಗೂ ಮುನ್ನ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜ್ಯದ 3.45 ಲಕ್ಷ ಖಾಸಗಿ ಶಾಲೆ ಶಿಕ್ಷಕರಿಗೂ ತಲಾ 10 ಸಾವಿರ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದರು. ಇದುವರೆಗೂ ಘೋಷಣೆಯಾಗಿಯೇ ಉಳಿದಿದೆ ಎಂದರು.
ಇದು ಅವಶ್ಯಕತೆ ಇತ್ತೇ?
ಮರಾಠ ಪ್ರಾಧಿಕಾರಕ್ಕೆ 50ಕೋಟಿ, ಒಕ್ಕಲಿಗರಿಗೆ, ಲಿಂಗಾಯತ ಸಮುದಾಯಕ್ಕೆ 500 ಕೋಟಿ ನೀಡುತ್ತಿದ್ದಾರೆ. ಅವರಿಗೆ ಕೊಡಬೇಡಿ ಎಂದು ನಾವು ಹೇಳುತ್ತಿಲ್ಲ. ಇಂದಿನ ಪರಿಸ್ಥಿತಿಗೆ ಅದರ ಅವಶ್ಯಕತೆ ಇದೆಯಾ ಎಂದು ಪ್ರಶ್ನಿಸಿದರು. ಖಾಸಗಿ ಶಾಲೆ ಶಿಕ್ಷಕರು ಎಂಟು ತಿಂಗಳಿನಿಂದ ತಿನ್ನಲು ಅನ್ನವಿಲ್ಲದೆ ಬೀದಿಗೆ ಬಂದಿದ್ದಾರೆ. ಇಂತಹ ಕಷ್ಟದಲ್ಲಿರುವವರಿಗೆ ಮೊದಲು ಆದ್ಯತೆ ನೀಡಬೇಕೆ? ರಾಜಕಾರಣಕ್ಕಾಗಿ ಈ ಕಾರ್ಯ ಮಾಡಲು ಮುಂದಾದರೆ ಸಮಾಜ ಸುಧಾರಣೆಗಾಗಿ ಹಗಲಿರುಳು ಶ್ರಮಿಸುವ ಶಿಕ್ಷಕರು ಎಲ್ಲಿ ಹೋಗಬೇಕು ಎಂದು ಪ್ರಶ್ನಿಸಿದರು.
ಇದೇ ಸಂದರ್ಭ ಅಧ್ಯಕ್ಷ ನಾಗೇಶ್ ಅವರನ್ನು ಗೌರವಿಸಲಾಯಿತು.ಜಿಲ್ಲಾಧ್ಯಕ್ಷ ಹೇಮೋದರ್, ಗೌರವಾಧ್ಯಕ್ಷ ಕುಮಾರೇಗೌಡ, ಉಪಾಧ್ಯಕ್ಷ ನಟರಾಜ್, ಕಾರ್ಯದರ್ಶಿ ಪರಮೇಶ್ ರಾಜ್ ಅರಸ್, ಖಜಾಂಚಿ ಪ್ರಶಾಂತ್ ತಾಲೂಕು ಅಧ್ಯಕ್ಷ ಸಂದೀಪ್ ಇತರರು ವೇದಿಕೆಯಲ್ಲಿದ್ದರು.