ಖಾಸಗಿ ಶಾಲಾ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಿ

9 lxr 1
Published on

ಲಕ್ಷ್ಮೇಶ್ವರ: ಖಾಸಗಿ ಶಾಲಾ ಶಿಕ್ಷಕರು ಜೀವನ ನಿರ್ವಹಣೆಗೆ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದ್ದು ಸರ್ಕಾರ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ರಾಜ್ಯ ಖಾಸಗಿ ಶಿಕ್ಷಕರ ಬಳಗದ ಅಧ್ಯಕ್ಷ ನಾಗೇಶ ಸಿ.ಎಸ್. ಹೇಳಿದರು.

ಪಟ್ಟಣದಲ್ಲಿ ಸೋಮವಾರ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಬಳಗದ ಜಿಲ್ಲಾ ಘಟಕ ಉದ್ಘಾಟಿಸಿ ಅವರು ಮಾತನಾಡಿದರು. ‘ಖಾಸಗಿ ಶಾಲಾ ಶಿಕ್ಷಕರು ಉನ್ನತ ಪದವಿ, ಪ್ರತಿಭೆ, ಪ್ರಾವೀಣ್ಯತೆ ಹೊಂದಿದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿದ್ದಾರೆ. ಕರೊನಾದಿಂದ ಶಾಲೆಗಳು ಬೀಗ ಹಾಕಿದ್ದರಿಂದ ಸಾವಿರಾರು ಶಿಕ್ಷಕರಿಗೆ ಸಂಬಳವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ. ಅನೇಕರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ ಎಂದರು.

ಸರ್ಕಾರ ಮತ್ತು ಖಾಸಗಿ ಶಿಕ್ಷಣ ಸಂಸ್ಥೆಗಳ ಮಧ್ಯದ ಒಳಒಪ್ಪಂದಗಳಿಂದ ಶಿಕ್ಷಕರು ಶೋಷಣೆಗೆ ಒಳಗಾಗುತ್ತಿದ್ದಾರೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರ ಶ್ರೇಯೋಭಿವೃದ್ಧಿಗಾಗಿ ಪೂರಕ ಮಾರ್ಗಸೂಚಿಗಳಿದ್ದರೂ ಮಾಹಿತಿ ಕೊರತೆಯಿಂದ ಇವುಗಳಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಕರೊನಾ ಕಾರಣ ಹೇಳಿ 7-8 ತಿಂಗಳಿನಿಂದ ಸಂಬಳ ನೀಡುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿ ಮತ್ತೆ ಶಿಕ್ಷಕರನ್ನು ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೋ ಇಲ್ಲವೂ, ಸಂಬಳ ಕೊಡದಿದ್ದರೆ ಜೀವನ ನಿರ್ವಹಣೆ ಹೇಗೆ? ಖಾಸಗಿ ಶಿಕ್ಷಕರ ಬದುಕು ಕೇಳುವವರು ಯಾರು? ಎಂಬಿತ್ಯಾದಿ ಪ್ರಶ್ನೆಗಳು ಕಾಡುತ್ತಿವೆ. ಆದ್ದರಿಂದ ಸದಾ ಅತಂತ್ರದ ಭೀತಿಯಲ್ಲಿರುವ ಖಾಸಗಿ ಶಾಲಾ ಶಿಕ್ಷಕರು ಸಂಘಟಿತರಾಗುವ ಅಗತ್ಯವಿದೆ ಎಂದರು.

ಶಿಕ್ಷಕರಾದ ಸೋಮು ನವಲಗುಂದ, ಸ್ವಾತಿ ಪೈ, ಮಲ್ಲಿಕಾರ್ಜುನ ಬಂಕಾಪೂರ, ದಶರಥ ಕೋಟೆಗೌಡ್ರ, ಚನ್ನಪ್ಪ ಬೆಟಸೂರ ಇತರರಿದ್ದರು. ರಾಜೇಶ ಸ್ವಾಗತಿಸಿದರು, ಫಕೀರೇಶ ಚಕಾರದ ನಿರೂಪಿಸಿದರು, ಸಂತೋಷ ಮಲ್ಲಿಗವಾಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net