ಶಿಕ್ಷಕರು ಮಕ್ಕಳ ಭವಿಷ್ಯ ರೂಪಕರು:ರಾಜಶೇಖರ ಹಿಟ್ನಾಳ

private school association teachers day celebration
Published on

ಕೊಪ್ಪಳ: ಪಾಲಕರು ಮಕ್ಕಳಿಗೆ ಜನ್ಮ ನೀಡಿದರೆ, ಶಿಕ್ಷಕರು ಮಕ್ಕಳ ಭವಿಷ್ಯ ರೂಪಿಸುತ್ತಾರೆ ಎಂದು ಸಂಸದ ಕೆ.ರಾಜಶೇಖರ ಹಿಟ್ನಾಳ್​ ಹೇಳಿದರು.

ಕೊಪ್ಪಳ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದಿಂದ ನಗರದ ಮಧುಶ್ರೀ ಗಾರ್ಡನ್​ನಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಕಷ್ಟದಲ್ಲೂ ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿವೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರಿಗೆ ವೇತನ ಕಡಿಮೆ. ಆದರೆ, ಕೆಲಸ ಹೆಚ್ಚು. ಕೆಕೆಆರ್​ಡಿಬಿಯಿಂದ ಖಾಸಗಿ ಶಾಲೆಗಳಿಗೆ ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ಕೊಡಿಸಲು ನಾನೂ ಪ್ರಯತ್ನಿಸುವೆ. ಖಾಸಗಿ ಶಾಲಾಡಳಿತ ಮಂಡಳಿಗಳು ಎರಡು ಗುಂಪುಗಳಾಗಿವೆ. ಅದಾಗಬಾರದು. ಒಂದೇ ಇದ್ದರೆ ಉತ್ತಮ. ಖಾಸಗಿ ಶಾಲೆ ಶಿಕ್ಷಕರಿಗೂ ಗೌರವಧನ ನೀಡಬೇಕೆಂಬ ಬೇಡಿಕೆ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರುವೆ ಎಂದರು.

ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಉತ್ತಮ ಲಿತಾಂಶ ನೀಡುತ್ತಿವೆ. ಸರ್ಕಾರಿ, ಖಾಸಗಿ ಶಾಲೆಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು. ಖಾಸಗಿ ಶಾಲೆಗಳಲ್ಲಿ ಆ್ಯಂಬುಲೆನ್ಸ್​ ಸೇವೆ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಮಾತನಾಡಿ, ನಾವೆಲ್ಲ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಡಾ.ಸರ್ವಪಲ್ಲಿ ರಾಧಾಕೃಷ್ಣನ್​ ಶಿಕ್ಷಕರಾಗಿ ದೇಶದ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರು. ನಗರಸಭೆ ನಗರೋತ್ಥಾನದ ಎಸ್ಸಿಪಿ&ಟಿಎಸ್ಪಿ ಅನುದಾನದಡಿ ಎಸ್ಸಿ&ಎಸ್ಟಿ ಮತ್ತು ಹಿಂದುಳಿದ ವರ್ಗದ ಮಕ್ಕಳ ಶುಲ್ಕ ಭರಿಸುವ ಚಿಂತನೆ ಇದೆ ಎಂದರು.

ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೇಂದ್ರ ಸರ್ಕಾರ 1.26 ಲಕ್ಷ ಕೋಟಿ ರೂ. ಶಿಕ್ಷಣ ಮತ್ತು ಉದ್ಯೋಗಕ್ಕೆ ಕಾಯ್ದಿರಿಸಿದೆ. ಶಿಕ್ಷಕರನ್ನು ಕಾಯಂಗೊಳಿಸಬೇಕು. ಖಾಸಗಿ ಶಾಲೆಗಳ ಶಿಕ್ಷಕರ ಕಲ್ಯಾಣ ನಿಧಿ ರಚಿಸುತ್ತಿದ್ದು, ಜನಪ್ರತಿನಿಧಿಗಳು ಸಹಕರಿಸಬೇಕು ಎಂದರು. ಕೊಪ್ಪಳ ತಾಲೂಕು ಖಾಸಗಿ ಶಾಲೆಗಳ ಒಕ್ಕೂಟ ಅಧ್ಯಕ್ಷ ಬಸವರಾಜ ತಳಕಲ್​, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ಬಿಇಒ ಶಂಕ್ರಯ್ಯ ಟಿ.ಎಸ್​., ಪ್ರಮುಖರಾದ ಬಸವರಾಜ ಬಳ್ಳೊಳ್ಳಿ, ಪ್ರಹ್ಲಾದ ಅಗಳಿ, ಗಿರೀಶ ಕಣವಿ, ಆರ್​.ಎಚ್​.ಅತ್ತನೂರು, ಮಲ್ಲಿಕಾರ್ಜುನ ಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net