ಮೈಸೂರಿನಲ್ಲಿ ಪಾರಂಪರಿಕ ಕಟ್ಟಡ ಉಳಿವಿಗೆ ಖಾಸಗಿ ಸಹಭಾಗಿತ್ವ..!

Devaraja market
Published on

ಸದೇಶ್ ಕಾರ್ಮಾಡ್ ಮೈಸೂರು
ಪಾರಂಪರಿಕ ನಗರಿ ಮೈಸೂರು ತನ್ನ ಭವ್ಯ ಪರಂಪರೆಯ ಮೂಲಕ ವಿಶ್ವದ ಗಮನ ಸೆಳೆಯುತ್ತಿರುವ ನಗರ. ಆದರೆ, ಇತ್ತೀಚಿನ ವರ್ಷ ಗಳಲ್ಲಿ ನಗರದಲ್ಲಿ ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪಿ ಒಂದೊಂದಾಗಿ ಕುಸಿದು ಬೀಳಲು ಪ್ರಾರಂಭಿಸಿವೆ. ಈ ಕಟ್ಟಡಗಳನ್ನು ಉಳಿ ಸಲು ನಗರ ಪಾಲಿಕೆಯು ಖಾಸಗಿ ಸಹಭಾಗಿತ್ವದಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ಕೈಗೆತ್ತಿಕೊಳ್ಳಲು ಚಿಂತನೆ ನಡೆಸಿದೆ.

ಸಿದ್ದರಾಮಯ್ಯ ಪ್ರಥಮ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ನಗರದ ಪಾರಂಪರಿಕ ಕಟ್ಟಡಗಳ ಉಳಿವಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ನೀಡಿದ್ದರು. ಅದೇ ರೀತಿ ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಸಿದ್ದರಾಮಯ್ಯ ಪಾರಂಪರಿಕ ಕಟ್ಟಡಗಳ ಉಳಿವಿಗೆ ವಿಶೇಷ ಅನುದಾನ ನೀಡುವ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ಬಜೆಟ್‌ನಲ್ಲಿ ಸಿದ್ದರಾಮಯ್ಯ ಅನುದಾನ ಘೋಷಿಸದೆ ನಿರಾಶೆ ಮೂಡಿಸಿ ದರು.

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರದಿಂದ ಅನುದಾನ ದೊರೆತ್ತಿಲ್ಲ ಎಂದು ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯದಿ ಂದ ಹಿಂದೆ ಸರಿದರೆ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಪಾರಂಪರಿಕ ಕಟ್ಟಡಗಳು ಕುಸಿದು ಬೀಳುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ಕೈಗೊಳ್ಳುವುದು ಅನಿವಾರ್ಯ.

ಕೆಲವು ವರ್ಷಗಳ ಹಿಂದೆ ಗಾಳಿ, ಮಳೆ ಹಾಗೂ ಕೋತಿಗಳ ಹಾವಳಿಯಿಂದಾಗಿ ಚಾಮುಂಡೇಶ್ವರಿ ದೇವಸ್ಥಾನದ ರಾಜಗೋಪುರ ಹಾಗೂ ವಿಮಾನ ಗೋಪುರಗಳಲ್ಲಿದ್ದ ದೇವತಾ ಮೂರ್ತಿಗಳು ವಿರೂಪಗೊಂಡಿದ್ದವು. ಟಿವಿಎಸ್ ಕಂಪನಿ ಸಹಯೋಗದೊಂದಿಗೆ ದೇವ ಸ್ಥಾನ ಆಡಳಿತ ಮಂಡಳಿಯು ದೇವಸ್ಥಾನದ ಸಂರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿತು. ಇದೇ ರೀತಿ ಖಾಸಗಿ ಸಹಭಾಗಿತ್ವದಲ್ಲಿ ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ನಡೆಯುವ ಅವಶ್ಯಕತೆ ಇದೆ.

ನಗರದಲ್ಲಿ ಸಾಕಷ್ಟು ಪ್ರತಿಷ್ಠಿತ ಕಂಪನಿಗಳು ಇದ್ದು, ಕಂಪನಿಗಳ ಸಿಎಸ್‌ಆರ್ ನಿಧಿಯನ್ನು ಸಂರಕ್ಷಣಾ ಕಾರ್ಯಕ್ಕೆ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕಂಪನಿಗಳ ಬಳಿ ಮನವಿ ಮಾಡಿಕೊಂಡರೆ ನಿಶ್ಚಿತವಾಗಿಯೂ ಒಂದಲ್ಲಾ ಒಂದು ಕಂಪನಿ ನಗರದ ಪಾರಂಪರಿಕ ಕಟ್ಟಡಗಳ ಉಳಿವಿಗೆ ಮುಂದೆ ಬರುವುದು ನಿಶ್ಚಿತ. ಈ ನಿಟ್ಟಿನಲ್ಲಿ ನಗರ ಪಾಲಿಕೆ ಚಿಂತನೆ ನಡೆಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕಳೆದ ಕೆಲವು ತಿಂಗಳ ಹಿಂದೆ ಮೇಯರ್ ಶಿವಕುಮಾರ್ ವಿಶೇಷ ಆಸಕ್ತಿ ವಹಿಸಿ ಪಾರಂಪರಿಕ ತಜ್ಞರೊಂದಿಗೆ ಈ ನಿಟ್ಟಿನಲ್ಲಿ ಚರ್ಚೆ ನಡೆಸಿ ದ್ದರು. ಆ ಚರ್ಚೆಯನ್ನು ಇದೀಗ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಮೇಯರ್ ಶಿವಕುಮಾರ್ ಪ್ರಯತ್ನಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ, ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಖಾಸಗಿ ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿವೆ. ಅಲ್ಲದೆ, ಕೋವಿಡ್ ಸಂದರ್ಭ ಮೈಸೂರು ಮೃಗಾಲಯಕ್ಕೆ ನಗರದ ಕಂಪನಿಗಳು ದೊಡ್ಡ ಮಟ್ಟದ ನೆರವನ್ನು ನೀಡಿರುವುದನ್ನು ಪ್ರತಿಯೊಬ್ಬರು ಸ್ಮರಿಸುತ್ತಾರೆ. ಹಾಗಾಗಿ ನಗರ ಪಾಲಿಕೆ ಹಾಗೂ ಖಾಸಗಿ ಕಂಪನಿಗಳು ಮನಸ್ಸು ಮಾಡಿದರೆ ನಗರದ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ದೊಡ್ಡ ವಿಚಾರವೇನು ಇಲ್ಲ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯದೆ ಹೋದರೆ ಮುಂದೊ ಂದು ದಿನ ನಮ್ಮ ಮುಂದಿನ ತಲೆಮಾರು ಪಾರಂಪರಿಕ ಕಟ್ಟಡಗಳನ್ನು ಕೇವಲ ಚಿತ್ರದಲ್ಲಿ ಮಾತ್ರ ಕಾಣಲು ಸಾಧ್ಯ.

ದೇವರಾಜ, ಲ್ಯಾನ್ಸ್‌ಡೌನ್ ಉಳಿಯಲಿ

ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳ ಒಂದು ಭಾಗ ಕುಸಿದು ಒಂದು ದಶಕ ಕಳೆದಿದೆ. ಈ ಕಟ್ಟಡಗಳು ದುಸ್ಥಿತಿಯಲ್ಲಿದೆ ಎಂದು ನೆಪವೊಡ್ಡಿ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಕಳೆದ ಬಾರಿಯ ದಸರಾ ಉತ್ಸವದ ಜಂಬೂಸವಾರಿ ಮೆರವಣಿಗೆ ಸಂದರ್ಭ ಸಾವಿರಾರು ಜನರು ಲ್ಯಾನ್ಸ್‌ಡೌನ್ ಕಟ್ಟಡವನ್ನು ಏರಿ ಮೆರವಣಿಗೆಯನ್ನು ವೀಕ್ಷಿಸಿದ್ದರು. ಒಂದು ದಶಕದ ಅವಧಿಯಲ್ಲಿ ಈ ಎರಡು ಕಟ್ಟಡಗಳು ನಿರ್ವಹಣೆಯನ್ನೇ ಕಾಣದೆ ಇದ್ದರೂ, ಸಾಕಷ್ಟು ಗಾಳಿ, ಮಳೆಯ ಹೊಡೆತ ತಿಂದರೂ ಕುಸಿದು ಬಿದ್ದಿಲ್ಲ. ಇದು ಈ ಕಟ್ಟಡ ಎಷ್ಟೊಂದು ಸದೃಢವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಕಟ್ಟಡಗಳನ್ನು ಕೆಡವಿ ಹೊಸದಾಗಿ ಪಾರಂಪರಿಕ ಶೈಲಿಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಪಾಲಿಕೆ ಇನ್ನಾದರೂ ತನ್ನ ನಿರ್ಧಾರ ಬದಲಾಯಿಸಿಕೊಂಡು ಈ ಅಮೂಲ್ಯವಾದ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವ ಕಡೆಗೆ ಗಮನ ಹರಿಸುವುದು ಉತ್ತಮ.

ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಸಂರಕ್ಷಿಸಲು ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಪಾರಂಪರಿಕ ತಜ್ಞರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ. ಅಲ್ಲದೆ, ಕೆಲವು ಸಂಘ ಸಂಸ್ಥೆಗಳ ಪ್ರಮುಖರೊಂದಿಗೆ ಮಾತುಕತೆ ನಡೆಸಲಾಗಿದೆ. ಆದರೆ, ನಮಗೆ ನಿರೀಕ್ಷಿತ ಸ್ಪಂದನೆ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಸಿಎಸ್‌ಆರ್ ನಿಧಿ ಬಳಸಿಕೊಂಡು ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ಕೈಗೊಳ್ಳಲು ಪ್ರಯತ್ನಿಸಲಾಗುವುದು. ಈ ನಿಟ್ಟಿನಲ್ಲಿ ಖಾಸಗಿ ಕಂಪನಿಗಳೊಂದಿಗೆ ಮಾತುಕತೆ ನಡೆಸಲಾಗುವುದು. ಸದ್ಯದಲ್ಲಿಯೇ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿ ಸಂರಕ್ಷಣಾ ಕಾರ್ಯದಲ್ಲಿ ಕೈಜೋಡಿಸುವಂತೆ ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಖಾಸಗಿ ಕಂಪನಿಗಳಲ್ಲಿ ಮನವಿ ಮಾಡಲಾಗುವುದು.
ಶಿವಕುಮಾರ್, ಮೇಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net