

ಸದೇಶ್ ಕಾರ್ಮಾಡ್ ಮೈಸೂರು
ಸಾಂಸ್ಕೃತಿಕ ನಗರಿ ಮೈಸೂರು ತನ್ನ ಭವ್ಯ ಪರಂಪರೆಯ ಕಾರಣಕೋಸ್ಕರ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡಿದೆ. ಮೈಸೂರಿಗೆ ಇಂಥದೊಂದು ವಿಶಿಷ್ಟ ಸ್ಥಾನ ತಂದುಕೊಡುವಲ್ಲಿ ಪಾರಂಪರಿಕ ಕಟ್ಟಡಗಳ ಕೊಡುಗೆ ಅಪಾರ. ಆದರೆ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಸರ್ಕಾರದಿಂದ ಕಾಲ ಕಾಲಕ್ಕೆ ಅನುದಾನ ದೊರೆಯುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾಸಗಿ ಸಹಭಾಗಿತ್ವದಲ್ಲಿ ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ಚಿಂತನೆ ನಡೆದಿದೆ.
ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ವಿಶೇಷ ಅನುದಾನ ಘೋಷಿಸಬೇಕು ಎಂದು ಮೇಯರ್ ಶಿವಕುಮಾರ್ ಸರ್ಕಾರದ ಗಮನ ಸೆಳೆದಿದ್ದರು. ಸರ್ಕಾರ ಬಜೆಟ್‌ನಲ್ಲಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಕ್ರಮ ವಹಿಸುವ ಘೋಷಣೆ ಮಾತ್ರ ಮಾಡಿದೆಯೇ ಹೊರತು ನಿರ್ದಿಷ್ಟ ಮೊತ್ತ ಘೋಷಣೆ ಮಾಡದೆ ಇರುವುದು ನಿರಾಶೆ ಮೂಡಿಸಿದೆ. ಪಾರಂಪರಿಕ ಕಟ್ಟಡಗಳ ನಿರ್ವಹಣೆ ವಿಚಾರದಲ್ಲಿ ಈ ರೀತಿಯ ನಿರಾಶೆ ಪ್ರತಿ ವರ್ಷ ಕಂಡು ಬರುತ್ತದೆ. ಹಾಗಾಗಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಯನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಇತ್ತೀಚೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ನಗರದಲ್ಲಿ ಇನ್ಫೋಸಿಸ್, ವಿಪ್ರೋ ಸೇರಿದಂತೆ ಹಲವು ಪ್ರತಿಷ್ಠಿತ ಕಂಪನಿಗಳು ಇದ್ದು, ವಿವಿಧ ಕಂಪನಿಗಳ ಪ್ರಮುಖರ ಸಭೆಯನ್ನು ನಡೆಸಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆ ಹಾಗೂ ನಿರ್ವಹಣೆಯ ಜವಾಬ್ದಾರಿ ವಹಿಸಿಕೊಳ್ಳುವಂತೆ ಮನವಿ ಮಾಡಲು ತೀರ್ಮಾನಿಸ ಲಾಗಿದೆ. ಕಂಪನಿಗಳು ಒಪ್ಪಿಕೊಂಡರೆ ಸಂರಕ್ಷಣಾ ಕಾರ್ಯ ಕೈಗೊಳ್ಳಬೇಕಾಗಿರುವ ಕಟ್ಟಡಗಳ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ ಒಪ್ಪಿಗೆ ಪಡೆಯುವ ಅವಶ್ಯಕತೆ ಇದೆ. ಸರ್ಕಾರ ಒಪ್ಪಿಗೆ ನೀಡಿದ ನಂತರ ಸಂರಕ್ಷಣಾ ಕಾರ್ಯದ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸಬಹುದು.
ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯವನ್ನು ಖಾಸಗಿ ಸಹಭಾಗಿತ್ವದಲ್ಲಿ ಕೈಗೊಳ್ಳಲು ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾಯ್ದೆಯಲ್ಲಿಯೇ ಅವಕಾಶ ಮಾಡಿಕೊಡಲಾಗಿದೆ. ಹೀಗಾಗಿ ಖಾಸಗಿ ಕಂಪನಿಗಳು ಹಾಗೂ ಸರ್ಕಾರ ಮನಸ್ಸು ಮಾಡಿದರೆ ನಗರದ ಪಾರಂಪರಿಕ ಕಟ್ಟಡಗಳು ಅಭಿವೃದ್ಧಿಯ ಭಾಗ್ಯವನ್ನು ಕಾಣಲಿದೆ. ಸರ್ಕಾರ ಒಪ್ಪಿದರೆ ನಂತರ ಪಾರಂಪರಿಕ ಕಟ್ಟಡಗಳನ್ನು ಖಾಸಗಿ ಕಂಪನಿಗಳು ಯಾವ ರೀತಿ ಅಭಿವೃದ್ಧಿ ಪಡಿಸಬೇಕು ಹಾಗೂ ಅವುಗಳನ್ನು ಮುಂದೆ ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬ ಕುರಿತು ಒಡಂಬಡಿಕೆ ಮಾಡಿಕೊಳ್ಳಲಾಗುತ್ತದೆ.
ಆಸಕ್ತಿ ತೋರುತ್ತಿರುವ ಸಂಘ ಸಂಸ್ಥೆಗಳು:
‘ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯನ್ನು ಸರ್ಕಾರಕ್ಕೆ ಸಂರಕ್ಷಣೆ ಮಾಡಲು ಸಾಧ್ಯವಾಗದೆ ಹೋದರೆ ನಮಗೆ ನೀಡಿದರೆ ನಾವು ಸಂರಕ್ಷಣೆ ಮಾಡುತ್ತೇವೆ’ ಎಂದು ಕೆಲವು ವರ್ಷಗಳ ಹಿಂದೆ ಮೈಸೂರು ರಾಜಮನೆತನದ ಪ್ರಮೋದಾದೇವಿ ಒಡೆಯರ್ ಹೇಳಿಕೆ ನೀಡಿದ್ದರು. ನಗರದ ಪ್ರಮುಖ ವೃತ್ತಗಳ ಸಂರಕ್ಷಣೆ ಹಾಗೂ ನಿರ್ವಹಣೆ ಜವಾಬ್ದಾರಿಯನ್ನು ನಾವು ವಹಿಸಿಕೊಳ್ಳುತ್ತೇವೆ ಎಂದು ನಮ್ಮ ಮೈಸೂರು ಫೌಂಡೇಷನ್ ತಿಳಿಸಿದೆ. ದೊಡ್ಡಗಡಿಯಾರ ಸಂರಕ್ಷಣಾ ಕಾರ್ಯಕ್ಕೆ ಖಾಸಗಿ ಸಂಸ್ಥೆಯೊಂದು ಆಸಕ್ತಿ ತೋರುತ್ತಿದೆ. ಪಾರಂಪರಿಕ ಕಟ್ಟಡಗಳ ಉಳಿವಿಗೆ ಹಲವು ಸಂಘ ಸಂಸ್ಥೆಗಳು ಆಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿಟ್ಟಿನಲ್ಲಿ ಆದಷ್ಟು ಬೇಗ ಕಾರ್ಯಪ್ರವೃತ್ತವಾಗುವ ಅವಶ್ಯಕತೆ ಇದೆ.
ದುಸ್ಥಿತಿಯಲ್ಲಿ ಪಾರಂಪರಿಕ ಕಟ್ಟಡಗಳು:
ನಗರದಲ್ಲಿರುವ ಹಲವು ಪಾರಂಪರಿಕ ಕಟ್ಟಡಗಳು ದುಸ್ಥಿತಿಗೆ ತಲುಪಿದ್ದು, ಈ ಕಟ್ಟಡಗಳ ನಿರ್ವಹಣೆಗೆ ಸರ್ಕಾರ ಕಾಲಕಾಲಕ್ಕೆ ಅನು ದಾನ ನೀಡದೆ ಹೋದರೆ ಒಂದೊಂದಾಗಿ ಕಟ್ಟಡಗಳು ಕುಸಿದು ಬೀಳುವುದು ನಿಶ್ಚಿತ. ಕಳೆದ ಒಂದು ದಶಕದ ಅವಧಿಯಲ್ಲಿ ನಿರ್ವಹಣೆಯ ಕೊರತೆಯಿಂದ ಲ್ಯಾನ್ಸ್‌ಡೌನ್, ದೇವರಾಜ ಮಾರುಕಟ್ಟೆ, ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ, ವಾಣಿವಿಲಾಸ ಮಾರುಕಟ್ಟೆ, ಅಗ್ನಿ ಶಾಮಕ ದಳ ಕಟ್ಟಡ, ಜಯಲಕ್ಷ್ಮಿ ವಿಲಾಸ ಅರಮನೆ ಸೇರಿದಂತೆ ವಿವಿಧ ಕಟ್ಟಡಗಳ ಕೆಲವು ಭಾಗಗಳು ಕುಸಿದು ಬಿದ್ದಿದೆ.
ಪುರಭವನ ಕಟ್ಟಡ ಸಂಪೂರ್ಣ ದುಸ್ಥಿತಿಗೆ ತಲುಪಿದ್ದು, ಈ ಕಟ್ಟಡದ ಒಂದು ಭಾಗ ಇಂದಲ್ಲ ನಾಳೆ ಕುಸಿದು ಬೀಳುವುದು ನಿಶ್ಚಿತ. ಅಷ್ಟರೊಳಗೆ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳಲು ಸರ್ಕಾರ ಮನಸ್ಸು ಮಾಡಬೇಕಾಗಿದೆ. ಅದೇ ರೀತಿ ದೊಡ್ಡಗಡಿಯಾರ ಗೋಪುರ ದುಸ್ಥಿತಿಯಲ್ಲಿದ್ದು, ಸಂರಕ್ಷಣಾ ಕಾರ್ಯವನ್ನು ನಗರ ಪಾಲಿಕೆ ಹಾಗೂ ಪಾರಂಪರಿಕ ಇಲಾಖೆ ವಹಿಸಿಕೊಂಡಿದ್ದು, ಆದಷ್ಟು ಬೇಗ ಕಾಮಗಾರಿ ಕೈಗೆತ್ತಿಕೊಳ್ಳುವ ಅವಶ್ಯಕತೆ ಇದೆ.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡವನ್ನು ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡಬೇಕು ಎಂದು ನಗರ ಪಾಲಿಕೆ ತೀರ್ಮಾನಿಸಿದೆ. ಈ ವಿಚಾರ ಹೈಕೋರ್ಟ್ ಅಂಗಳದಲ್ಲಿ ಇದ್ದು, ಅಂತಿಮ ತೀರ್ಮಾನ ಹೊರ ಬಿದ್ದ ನಂತರವಷ್ಟೇ ಈ ಕಟ್ಟಡಗಳ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಲು ಸಾಧ್ಯ. ಆದರೆ, ಉಳಿದ ಪಾರಂಪರಿಕ ಕಟ್ಟಡಗಳನ್ನು ಅಭಿವೃದ್ಧಿ ಪಡಿಸಲು ಯಾವುದೇ ಅಡ್ಡಿ ಇಲ್ಲದ ಹಿನ್ನೆಲೆಯಲ್ಲಿ ಆದಷ್ಟು ಬೇಗ ಪಾರಂಪರಿಕ ಕಟ್ಟಡಗಳು ಸಂರಕ್ಷಣೆ ಕಾಣಲಿ ಎಂಬುದೇ ನಗರದ ನಾಗರಿಕರ ಬಯಕೆಯಾಗಿದೆ.
ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಅನುದಾನ ಘೋಷಣೆ ಮಾಡದೆ ಇರುವುದು ಬೇಸರ ತರಿಸಿದೆ. ಸರ್ಕಾರವನ್ನು ನಂಬಿಕೊಂಡು ಕೂತರೆ ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಸಂರಕ್ಷಣಾ ಕಾರ್ಯ ಕೈಗೊಳ್ಳುವುದು ಸೂಕ್ತ. ಪಾರಂಪರಿಕ ಕಟ್ಟಡಗಳ ಸಂರಕ್ಷಣಾ ಕಾರ್ಯವನ್ನು ಖಾಸಗಿಯವರಿಗೆ ವಹಿಸುವ ಕುರಿತು ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮುಂದಿನ ಹಂತದಲ್ಲಿ ಖಾಸಗಿ ಕಂಪನಿಗಳ ಜತೆಗೆ ಮಾತುಕತೆ ಹಾಗೂ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಪ್ರಕ್ರಿಯೆ ಬಾಕಿ ಇದೆ.
ಪ್ರೊ.ಎನ್.ಎಸ್. ರಂಗರಾಜು, ಸದಸ್ಯ, ಜಿಲ್ಲಾ ಪಾರಂಪರಿಕ ಸಮಿತಿ