

ಬಳ್ಳಾರಿ: ನಗರದ ಖಾಸಗಿ ಸಂಸ್ಥೆಗೆ ವಿಮ್ಸ್ ಕ್ರೀಡಾಂಗಣ ನೀಡದಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ 6 ಗಂಟೆಗೇ ಕ್ರೀಡಾಂಗಣದಲ್ಲಿ ಸೇರಿದ್ದ ಮಕ್ಕಳು, ನಾಗರಿಕರು ಹಾಗೂ ಸಂಘಟನೆಗಳ ಪದಾಧಿಕಾರಿಗಳು, ಕಳೆದ 50 ವರ್ಷದಿಂದ ವಾಯುವಿಹಾರ, ಮಕ್ಕಳ ಆಟಕ್ಕೆ ಕ್ರೀಡಾಂಗಣ ಅನುಕೂಲವಾಗಿದೆ. ಈಗ ಖಾಸಗಿಯವರಿಗೆ ನೀಡಿದರೆ ಜನರಿಗೆ ಪ್ರವೇಶ ಇರಲ್ಲ ಇಲ್ಲವೆ ಶುಲ್ಕ ನಿಗದಿ ಮಾಡುತ್ತಾರೆ. ಈ ಕ್ರೀಡಾಂಗಣ ಹೊರತು ನಮಗೆ ಬೇರೆಲ್ಲೂ ಜಾಗವಿಲ್ಲ. ಹೀಗಾಗಿ ಖಾಸಗಿಯವರಿಗೆ ಕೊಡುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ವಿಮ್ಸ್ ಸೂಪರಿಂಟೆಂಡೆಂಟ್ ಡಾ.ಮರಿರಾಜ್, ಮೇಲಧಿಕಾರಿಗಳಿಗೆ ಗಮನಕ್ಕೆ ವಿಮ್ಸ್ ಕ್ರೀಡಾಂಗಣ ಖಾಸಗಿ ಸಂಸ್ಥೆಗೆ ನೀಡದಿರಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಜನರು ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.
ವಕೀಲರಾದ ಜನಾರ್ದನ್, ನಾಗಭೂಷಣರಾವ್, ಹಿರಿಯ ನಾಗರಿಕರಾದ ಗಂಗಣ್ಣ, ಪ್ರಭಾಕರ್ ನಾಯ್ಡು, ಗೋಪಾಲ್ ರಾಮು, ಮೋಹನ್, ಹನುಮಯ್ಯ, ಮುತ್ಯಾಲಪ್ಪ, ಕೃಷ್ಣಾರೆಡ್ಡಿ, ಸುಂಕಲಪ್ಪ, ಸಿದ್ದೇಶ್, ವಿಷ್ಣು, ಪ್ರಮೋದ್, ಸೋಮಶೇಖರ್ ಗೌಡ ಸೇರಿ ನೂರಾರು ಸಾರ್ವಜನಿಕರಿದ್ದರು.