ಹೆಚ್ಚಿನ ದರ ವಸೂಲಿ ಆಸ್ಪತ್ರೆ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ

Gavel on desk. Isolated with good copy space. Dramatic lighting.
Gavel on desk. Isolated with good copy space. Dramatic lighting.
Published on


ಮಂಗಳೂರು: ಮಹಿಳೆಯೊಬ್ಬರ ಹೆರಿಗೆ ಸಂದರ್ಭ ನರ್ಸಿಂಗ್ ಹೋಮ್ ನಿಗದಿತ ದರಕ್ಕಿಂತ ಹೆಚ್ಚು ದರ ವಸೂಲಿ ಮಾಡಿರುವ ಆರೋಪ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆಸ್ಪತ್ರೆ ಆಡಳಿತ ಮಂಡಳಿಗೆ 5 ಲಕ್ಷ ರೂ. ದಂಡ ವಿಧಿಸಿ ಆದೇಶ ಮಾಡಿದೆ.


ಪ್ರಕರಣ ವಿವರ: ಮಹಿಳೆಯೊಬ್ಬರು ಹೆರಿಗೆಗಾಗಿ 2019ರ ಮೇ 29ರಂದು ಆಸ್ಪತ್ರೆಗೆ ದಾಖಲಾಗಿದ್ದು, ಅದೇ ದಿವಸ ಅವಳಿ ಮಕ್ಕಳಿಗೆ ಸಹಜ ಹೆರಿಗೆಯಲ್ಲಿ ಜನ್ಮ ನೀಡಿರುತ್ತಾರೆ. ಅವಳಿ ಮಕ್ಕಳ ತೂಕ ಕಡಿಮೆಯಾಗಿರುವುದರಿಂದ ಎನ್‌ಐಸಿಯುಗೆ ದಾಖಲಿಸಲು ಹೆರಿಗೆ ವೈದ್ಯರಾದ ನಳಿನಿ ಪೈ ಹಾಗೂ ಮಕ್ಕಳ ವೈದ್ಯ ಮಾರಿಯೋ ಜೆ. ಬುಕೆಲೋ ಹೇಳಿದ್ದರು. ಅದರಂತೆ ಮೇ 29ರಿಂದ ಜೂ.15ರವರೆಗೆ ಮಕ್ಕಳು ಚಿಕಿತ್ಸೆ ಪಡೆದಿರುತ್ತಾರೆ. ಜೂ.15ರಂದು ಮಹಿಳೆ 5,34,791ರೂ. ಪಾವತಿ ಮಾಡಿದ್ದಾರೆ. ಮಿತಿಮೀರಿದ ಚಿಕಿತ್ಸೆ ವೆಚ್ಚವನ್ನು ಪಡೆದಿರುತ್ತಾರೆ. 1.80ಲಕ್ಷ ರೂ. ವೈದ್ಯ ಮಾರಿಯೊ ಜೆ. ಬುಕೆಲೊ, 25ಸಾವಿರ ರೂ. ನಳಿನಿ ಪೈ ಅವರಿಗೆ ಸಂದಾಯ ಮಾಡಿರುತ್ತಾರೆ. ಈ ಬಗ್ಗೆ ಮಹಿಳೆಯ ಗಂಡ, ವಕೀಲ ರೋಶನ್‌ರಾಜ್ ಜಿಲ್ಲಾ ಆರೋಗ್ಯಾಧಿಕಾರಿಗೆ ಅಧಿಕ ವೈದ್ಯಕೀಯ ವೆಚ್ಚದ ದೂರನ್ನು ನೀಡಿರುತ್ತಾರೆ. ಆರೋಗ್ಯಾಧಿಕಾರಿ ತಾಲೂಕು ವೈದ್ಯಾಧಿಕಾರಿಗೆ ಆದೇಶ ಮಾಡಿರುತ್ತಾರೆ. ಅವರು ವರದಿಯನ್ನು ಡಿಎಚ್‌ಒಗೆ ನೀಡಿದ್ದರು. ಇದರಿಂದ ಸಮಾಧಾನವಾಗದ ರೋಶನ್‌ರಾಜ್ ಪ್ರಧಾನ ಮಂತ್ರಿ ಮೋದಿ ಹಾಗೂ ರಾಜ್ಯ ಆರೋಗ್ಯ ಸಚಿವ ರಾಮುಲು ಅವರಿಗೆ ದೂರನ್ನು ನೀಡುತ್ತಾರೆ. ಕೇಂದ್ರ ಸರ್ಕಾರವು ಜಿಲ್ಲಾ ಆರೋಗ್ಯ ಅಧಿಕಾರಿಗೆ ಕರ್ನಾಟಕ ಖಾಸಗಿ ವೈದ್ಯಕೀಯ ಅಧಿನಿಯಮ ಕಾಯಿದೆ 2017 ಕಲಂ 10ಪ್ರಕಾರ ದೂರನ್ನು ದಾಖಲಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಆದರೂ ಜಿಲ್ಲಾ ಆರೋಗ್ಯ ಇಲಾಖೆಯ ಡಿಎಚ್‌ಒ ಸೇರಿದಂತೆ ಇತರ ಅಧಿಕಾರಿಗಳು ನಿರಂತರ ನಿರ್ಲಕ್ಷ್ಯ ವಹಿಸುತ್ತಲೇ ಬಂದಿದ್ದರು. ಇದರಿಂದ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ಅರಿತ ರೋಶನ್‌ರಾಜ್ ಜಿಲ್ಲಾ ಗ್ರಾಹಕರ ನ್ಯಾಯಾಲಯದಲ್ಲಿ ಕೇಸನ್ನು ದಾಖಲಿಸುತ್ತಾರೆ.


ಜಿಲ್ಲಾ ಗ್ರಾಹಕರ ನ್ಯಾಯಾಲಯವು ಮಹಿಳೆ ಮತ್ತು ರೋಶನ್‌ರಾಜ್ ಹಾಗೂ ವೈದ್ಯರುಗಳ ಅರ್ಜಿಯನ್ನು ಪರಿಶೀಲಿಸಿ ದೂರುದಾರರ ಮತ್ತು ಪ್ರತಿವಾದಿಗಳ ವಾದ-ಪ್ರತಿವಾದಗಳನ್ನು ಆಲಿಸಿ ಮಹಿಳೆಗೆ 5 ಲಕ್ಷ ರೂ. ಹಣವನ್ನು 6 ವಾರದೊಳಗೆ ನೀಡಬೇಕೆಂದು ನ್ಯಾಯಾಧೀಶ ಪ್ರಕಾಶ್ ಕೆ. ಆದೇಶ ನೀಡಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net