

ಶಿವಮೊಗ್ಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ಭಾರತ್ ಬಂದ್ಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಅಂಗಡಿ ಮುಂಗಟ್ಟುಗಳು ತೆರೆದಿದ್ದರೆ, ಹೋಬಳಿ ಕೇಂದ್ರಗಳಲ್ಲಿ ಜನಜೀವನ ಸಹಜವಾಗಿತ್ತು. ಶಿವಮೊಗ್ಗ ತಾಲೂಕಿನ ರೈತ ಸಂಘಟನೆಗಳ ಪ್ರಮುಖರು ಕೆಲಕಾಲ ಹೆದ್ದಾರಿ ತಡೆ ನಡೆಸಿದರು.
ಖಾಸಗಿ, ಕೆಎಸ್ಆರ್ಟಿಸಿ ಬಸ್ ಸಂಚಾರ ಎಂದಿನಂತೆಯೇ ಇತ್ತು. ಆದರೆ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಹೀಗಾಗಿ ಮಧ್ಯಾಹ್ನದ ಬಳಿಕ ಬಸ್ ಸಂಚಾರವೂ ಕಡಿಮೆಯಾಗಿತ್ತು. ಸಾಗರ ತಾಲೂಕು ಕೇಂದ್ರ ಜನಜೀವನ ಎಂದಿನಂತೆಯೇ ಇತ್ತು. ವ್ಯಾಪಾರ ವಹಿವಾಟುಗಳಲ್ಲೂ ವ್ಯತ್ಯಾಸವಿರಲಿಲ್ಲ.
ತೀರ್ಥಹಳ್ಳಿಯಲ್ಲಿ ಕೆಲವೊಂದ ಅಂಗಡಿಗಳನ್ನು ಮುಚ್ಚಲಾಗಿತ್ತು. ಖಾಸಗಿ ವಾಹನ ಸಂಚಾರ ಸಹಜವಾಗಿತ್ತು. ತ್ಯಾಗರ್ತಿ, ಆನಂದಪುರ, ರಿಪ್ಪನ್ಪೇಟೆಯಲ್ಲಿ ಜನರು ನಿತ್ಯದ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಎಫೆಕ್ಟ್: ಐದು ದಿನಗಳಿಂದ ಶಿವಮೊಗ್ಗ ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ, ಹಳೇ ಶಿವಮೊಗ್ಗ ಭಾಗದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಗಾಂಧಿಬಜಾರ್, ನೆಹರು ರಸ್ತೆ, ಬಿಎಚ್ ರಸ್ತೆಯಲ್ಲಿ ಯಾವುದೇ ವಹಿವಾಟು ನಡೆಯಲಿಲ್ಲ.
ಕೆಲ ಹೋಟೆಲ್ಗಳನ್ನು ತೆರೆಯಲಾಗಿತ್ತು. ಹಾಲು, ಔಷಧ ಮುಂತಾದ ಅಗತ್ಯ ವಸ್ತುಗಳು ಲಭ್ಯವಿದ್ದವು. ಸರ್ಕಾರಿ ಕಚೇರಿ, ಅಂಚೆ ಕಚೇರಿ, ಬ್ಯಾಂಕ್ ಕಾರ್ಯನಿರ್ವಹಿಸಿದರೂ ವ್ಯವಹಾರ ಕಡಿಮೆಯಿತ್ತು.
ವಿವಿಧ ಸಂಘಟನೆಗಳಿಂದ ಪ್ರತಿಭಟನೆ: ಕೇಂದ್ರದ ಕೃಷಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಖಂಡಿಸಿ ಅನೇಕ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. ಕೆಲ ಸಂಘಟನೆಗಳು ರಸ್ತೆ ತಡೆಗೆ ಮುಂದಾದಾಗ ಪೊಲೀಸರ ಮಧ್ಯ ಪ್ರವೇಶದಿಂದ ರಸ್ತೆ ತಡೆ ಕೈಬಿಟ್ಟರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಕೃಷಿಕ ಸಮಾಜವನ್ನು ವಿನಾಶದೆಡೆಗೆ ತಳ್ಳುವ ರೈತ ವಿರೋಧಿ ತಿದ್ದುಪಡಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪ್ರಮುಖರು ಆಗ್ರಹಿಸಿದರು. ಕಾನೂನುಗಳನ್ನು ರೂಪಿಸುವಾಗ ಸಂಸತ್ನಲ್ಲಿ ಪ್ರತಿಪಕ್ಷಗಳಿಗೆ ಚರ್ಚೆ ಮಾಡಲು ಅವಕಾಶ ನೀಡಬೇಕು. ಆದರೆ ಸುಗ್ರೀವಾಜ್ಞೆ ಮೂಲಕ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ರೈತ ಮುಖಂಡ ಕೆ.ಟಿ.ಗಂಗಾಧರ್, ಡಿಎಸ್ಎಸ್ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ, ಸಾಹಿತಿ ಪ್ರೊ. ರಾಜೇಂದ್ರ ಚೆನ್ನಿ, ವಕೀಲ ಕೆ.ಪಿ.ಶ್ರೀಪಾಲ್ ಮುಂತಾದವರಿದ್ದರು.