

ಬೆಳಗಾವಿ: ಜಿಲ್ಲೆಯಲ್ಲಿ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬರುವ ಖಾಸಗಿ ಆಸ್ಪತ್ರೆ ಹಾಗೂ ಅಲ್ಲಿರುವ ಸೌಲಭ್ಯ ಪರಿಶೀಲಿಸಿ ಮಾರ್ಗಸೂಚಿ ಪ್ರಕಾರ ಅಧಿಕಾರಿಗಳು ತಕ್ಷಣವೇ ಅನುಮತಿ ನೀಡಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದ್ದಾರೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ರ‌್ಯಾಪಿಡ್ ಟೆಸ್ಟ್‌ಗೆ ಹೆಚ್ಚಿನ ಆದ್ಯತೆ ನೀಡಬೇಕು. ಏನಾದರೂ ಕೊರತೆ ಕಂಡುಬಂದರೆ ಉಸ್ತುವಾರಿ ಸಚಿವರು ಅಥವಾ ನನ್ನ ಗಮನಕ್ಕೆ ತನ್ನಿ ಎಂದು ಸೂಚಿಸಿದರು.
ಇದೀಗ ಖಾಸಗಿ ಆಸ್ಪತ್ರೆಯವರೂ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬರುತ್ತಿದ್ದು, ಸರ್ಕಾರ ನಿಗದಿಪಡಿಸಿದ ದರಪಟ್ಟಿಯ ಪ್ರಕಾರ ಅವರಿಗೆ ಅನುಮತಿ ನೀಡಿ.
ಇದರಿಂದ ಆಯಾ ತಾಲೂಕು ಪ್ರದೇಶಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ಒದಗಿಸಬಹುದು. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆಯಿದ್ದರೂ ಜನರಿಗೆ ಉತ್ತಮ ಚಿಕಿತ್ಸೆ ನೀಡಿ. ನಿಪ್ಪಾಣಿ ತಾಲೂಕು ಆಸ್ಪತ್ರೆಗೂ ವೆಂಟಿಲೇಟರ್ ಸೌಲಭ್ಯ ಆರಂಭಿಸಿ ಎಂದು ಸಚಿವೆ ಜೊಲ್ಲೆ ಸಲಹೆ ನೀಡಿದರು.
ಶೇ. 40ರಷ್ಟು ಜನ ಗುಣಮುಖ: ಬಿಮ್ಸ ನಿರ್ದೇಶಕ ವಿನಯ ದಾಸ್ತಿಕೊಪ್ಪ ಮಾತನಾಡಿ, ಸದ್ಯಕ್ಕೆ 371 ಸಕ್ರಿಯ ಪ್ರಕರಣಗಳಿವೆ. ಬಿಮ್ಸ್ ಆಸ್ಪತ್ರೆಯಲ್ಲಿ 32 ವೆಂಟಿಲೇಟರ್ ಸೌಲಭ್ಯ ಇದೆ. ಇದುವರೆಗೆ 96 ಜನರು ಮರಣ ಹೊಂದಿದ್ದು, ಶೇ.40ರಷ್ಟು ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು
ಸಚಿವರಿಗೆ ಮಾಹಿತಿ ನೀಡಿದರು.
ಶಾಸಕ ದುರ್ಯೋಧನ ಐಹೊಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ.ಮುನ್ಯಾಳ, ಜಿಲ್ಲಾ ಪಂಚಾಯಿತಿ ಸಿಇಒ ಎಚ್.ವಿ.ದರ್ಶನ, ಎಸ್ಪಿ ಲಕ್ಷ್ಮಣ ನಿಂಬರಗಿ, ಕರ್ನಾಟಕ ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಇಂಜಿನಿಯರ್ ಅರವಿಂದ ಕಣಗಲಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಕ್ಕಾರ, ನೀರಾವರಿ ಇಲಾಖೆಯ ಇಂಜಿನಿಯರ್ ಸಿ.ಡಿ.ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.