

ಸಿರಗುಪ್ಪ: ಕರೊನಾ ಸೋಂಕಿತರನ್ನು ಸಾರ್ವಜನಿಕರಿಂದ ಪ್ರತ್ಯೇಕಿಸಿ 14 ದಿನ ನಿಗಾವಹಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ವೈರಸ್ ಹರಡದಂತೆ ತಡೆಗಟ್ಟಬಹುದು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಮಧುಸೂದನ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ತಹಸೀಲ್ದಾರ್ ಎಸ್.ಬಿ.ಕೂಡಲಗಿ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಕರೊನಾ ವೈರಸ್ 3 ಮತ್ತು 4ನೇ ಹಂತ ತಲುಪಿದರೆ ಕಾಯಿಲೆ ನಿಯಂತ್ರಿಸುವುದು ಕಠಿಣವಾಗಲಿದೆ. ಒಂದು ಸಾವಿರ ರೋಗಿಗಳಿಗೆ 120 ವೈದ್ಯರ ಅಗತ್ಯ ಬೀಳಲಿದೆ. 20 ರೋಗಿಗಳಿಗೆ ವೆಂಟೆಲೇಷನ್ ಅಗತ್ಯವಾಗುತ್ತದೆ. ಬಿಸಿಲಿನಲ್ಲಿ ವೈರಾಣುಗಳು ಹರಡಲ್ಲ ಎನ್ನುವ ನಂಬಿಕೆ ಜನರಲ್ಲಿತ್ತು. ಆದರೆ, ಬಿಸಿಲುನಾಡು ಕಲಬುರಗಿಯ ವ್ಯಕ್ತಿಗೆ ರೋಗ ಕಾಣಿಸಿಕೊಂಡಿರುವುದು ನಮ್ಮ ನಂಬಿಕೆ ಹುಸಿಗೊಳಿಸಿದೆ. ಈ ವೈರಾಣು ಗಾಳಿಯಲ್ಲಿ ತುಂತುರು ಹನಿಯಂತೆ ಇರುವುದರಿಂದ ಬಿಸಿಲಿನಲ್ಲಿಯೂ ಹರಡಬಹುದಾಗಿದೆ. ಆದ್ದರಿಂದ ಸಂಘದಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ಬಂದ್‌ಮಾಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿ ಕರೊನಾ ರೋಗಿಗಳಿಗಾಗಿ ಪ್ರತ್ಯೇಕವಾಗಿ ವಾರ್ಡ್‌ಗಳನ್ನು ಪ್ರಾರಂಭಿಸಿ ಸಿಬ್ಬಂದಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತರಬೇತಿ ನೀಡಲಾಗುವುದು ಎಂದು ಹೇಳಿದರು. ಸಿಪಿಐ ಟಿ.ಆರ್.ಪವಾರ್, ಪೌರಾಯುಕ್ತ ಪ್ರೇಮ್‌ಚಾರ್ಲ್ಸ್ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.