ವಿವಿಧ ಬೇಡಿಕೆಗಳು ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಪ್ರತಿಭಟನೆ

raichur
raichur
Published on

ರಾಯಚೂರು ಮಾನ್ಯತೆ ನವೀಕರಣದಲ್ಲಿ ರುವ ಗೊಂದಲಗಳ ನಿವಾರಣೆ, ವಿದ್ಯಾರ್ಥಿಗಳ ಶುಲ್ಕದ ಮೇಲೆ ಜಿಎಸ್‌ಟಿ ಹೇರಿರುವುದು ಸೇರಿದಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಂಗಳವಾರ ಜಿಲ್ಲೆಯ ವಿವಿಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸುದರು.

ನಂತರ ಅಪರ ಜಿಲ್ಲಾಧಿಕಾರಿ ಶಿವಾನಂದ ಅವರಿಗೆ ಮನವಿ ಸಲ್ಲಿಸಿದವರು, ಶಾಲಾ ಕಾಲೇಜುಗಳ ಮಾನ್ಯತೆ ನವೀಕರಣದಲ್ಲಿರುವ ಗೊಂದಲಮಯ ಅಂಶಗಳನ್ನು ತೆಗೆದುಹಾಕಿ ನವೀಕರಣ ವ್ಯವಸ್ಥೆಯನ್ನು ಸರಳೀಕರಣಗೊಳಿಸುವುದು, ಅಗ್ನಿಶಾಮಕ, ಸುರಕ್ಷತೆ ಪ್ರಮಾಣ ಪತ್ರ ಪಡೆಯಲು ಕಷ್ಟವಾಗುತ್ತಿದ್ದು, ಅದನ್ನೂ ಸರಳೀಕರಣಗೊಳಿಸಿ, ನಿಗಧಿತ ಅವಧಿಯೊಳಗೆ ಅಗ್ನಿ ಶಾಮಕ ಸುರಕ್ಷತೆ ಪ್ರಮಾಣ ಪತ್ರ ಶಿಕ್ಷಣ ಸಂಸ್ಥೆಗಳ ಕೈಸೇರಬೇಕು ಎಂದು ಆಗ್ರಹಿಸಲಾಯಿತು.

ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗಕ್ಕೆ ಎಲ್ಲಾ ಸೌಲಭ್ಯಗಳನ್ನು ನೀಡುವಂತೆ ನಂಜುಂಡಪ್ಪ ವರದಿಯಲ್ಲಿ ಉಲ್ಲೇಖವಿದ್ದರೂ, ಈವರೆಗೂ ಯಾವ ಸೌಲಭ್ಯವನ್ನು ನೀಡಿಲ್ಲ, ಖಾಸಗಿ ಶಾಲಾ ಕಾಲೇಜುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ಸರ್ಕಾರದ ಆರೋಗ್ಯ ವಿಮೆ ಯೋಜನೆಯನ್ನು ನೀಡುವುದು. ಖಾಸಗಿ ಶಾಲಾ ಕಾಲೇಜುಗಳ ಮಾನ್ಯತಾ ನವೀಕರಣ ಸಮಯದಲ್ಲಿ ಈಗಾಗಲೇ ಶಾಲಾ ಕಾಲೇಜು ಕಟ್ಟಡ ಹೊಂದಿರುವ ಸಂಸ್ಥೆಗಳಿಗೆ ವಿಧಿಸಿರುವ ಭೂಪರಿವರ್ತನಾ ಷರತ್ತುಗಳನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಲಾಯಿತು.

ಆರ್‌ಟಿಇ ಕಂತುಗಳಲ್ಲಿರುವ ದೋಷ ಸರಿಪಡಿಸುವುದು, ಶಿಕ್ಷಣ ಕ್ಷೇತ್ರವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಮುಕ್ತಿಗೊಳಿಸುವುದು. ಶಾಲಾ ಕಾಲೇಜುಗಳ ಶಿಕ್ಷಕರು ಮತ್ತು ಆಡಳಿತ ಮಂಡಳಿಯ ಮೇಲೆ ಆಗುತ್ತಿರುವ ಹಲ್ಲೆಗಳನ್ನು ತಡೆಗಟ್ಟುವುದು. ಪಠ್ಯ ಪುಸ್ತಕಗಳನ್ನು ಸರ್ಕಾರ ನಿಗಧಿಪಡಿಸಿದ ದರದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡುವುದು. ಗ್ರಾಮೀಣ ಭಾಗದ ಶಾಲಾ ಕಾಲೇಜುಗಳ ಆಸ್ತಿ ತೆರಿಗೆಯಿಂದ ಮುಕ್ತಿಗೊಳಿಸುವುದು. ಶಿಕ್ಷಣ ಕ್ಷೇತ್ರದ ವಸತಿ ಶಾಲೆಗಳ ಪ್ರಾರಂಭ ಮತ್ತು ನಿರ್ವಹಣೆಗೆ ಸೂಕ್ತ ನಿಯಮಗಳನ್ನು ರಾಜ್ಯ ಸರ್ಕಾರ ರಚಿಸುವುದು. ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಪ್ರತಿಭಟನೆ ಮೂಲಕ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆ ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದ ಆವರಣದಿಂದ ಆರಂಭವಾಗಿ ಅಂಬೇಡ್ಕರ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ನಂತರ ಬಸ್ ನಿಲ್ದಾಣದ ಮುಂಭಾಗದಿಂದ ಮಹಾನಗರ ಪಾಲಿಕೆ ವಲಯ ಕಚೇರಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಿಂದ ವಾಲ್ಕಟ್ ಮೈದಾನ ತಲುಪಿತು. ಪ್ರತಿಭಟನೆಯಲ್ಲಿ 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಸಿಬ್ಬಂದಿ ಇದ್ದರು.

ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ನಾಗರಾಜ ಮಸ್ಕಿ, ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ, ಮಾಜಿ ಶಾಸಕ ಎ.ಪಾಪಾರೆಡ್ಡಿ, ಪ್ರತಾಪ್ ಗೌಡ ಪಾಟೀಲ್, ತಾರಾನಾಥ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪಾರಸಮಲ್ ಸುಖಾಣಿ, ರಾಜಾ ಶ್ರೀನಿವಾಸ ನಾಯಕ, ಕೇಶವರೆಡ್ಡಿ, ಡಾ. ರಝಾಕ ಉಸ್ತಾದ್, ಥಾಮಸ್ ಬೆಂಜಿಮನ್, ಮಲ್ಲಪ್ಪ, ರವಿ, ಯು.ದೊಡ್ಡಬಸವರಾಜ, ಇಟ್ಬಾಲ್ ಅಹ್ಮದ್ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net