

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು
ವಿಶ್ವವಿಖ್ಯಾತ ಮೈಸೂರು ಅರಮನೆಯ ವೈಭವೋಪೇತ ದರ್ಬಾರ್ ಹಾಲ್‌ನಲ್ಲಿ ಭಾನುವಾರ ಸಿಂಹಾಸನವನ್ನೇರಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸುವ ಮೂಲಕ ಗತಕಾಲದ ರಾಜವೈಭೋಗವನ್ನು ಮೆಲುಕು ಹಾಕಿದರು.
ರತ್ನಖಚಿತ ಸಿಂಹಾಸನಾರೋಹಣದೊಂದಿಗೆ ಪರಂಪರಾನುಗತವಾಗಿ ಆಚರಿಸಲಾಗುತ್ತಿರುವ ಖಾಸಗಿ ದರ್ಬಾರ್‌ಗೆ ಶುರುವಾಗಿದ್ದು, ರಾಜಮನೆತನದ ಪರಂಪರೆ, ಸಂಸ್ಕೃತಿ, ಹೊಗಳುಭಟ್ಟರ ಬಹುಪರಾಕ್ ಘೋಷಣೆ ರಿಂಗಣಿಸಿತು. 10 ದಿನಗಳವರೆಗೆ ಅರಮನೆಯಲ್ಲಿ ರಾಜವೈಭವದ ಖದರ್ ಗರಿಬಿಚ್ಚಲಿದೆ.
ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ದೊರೆತರೆ, ಅರಮನೆಯಲ್ಲಿ ನವರಾತ್ರಿ ಸಡಗರ ಶುರುವಾಯಿತು. ಖಾಸಗಿ ದರ್ಬಾರಿಗೆ ಪೂರಕವಾಗಿ ಬೆಳಗ್ಗೆ 5.30ರಿಂದಲೇ ಅರಮನೆಯಲ್ಲಿ ಪೂಜಾವಿಧಾನ ಆರಂಭಗೊಂಡಿತು. ಬೆಳಗ್ಗೆ 6 ಗಂಟೆಯ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹ, ಪಕ್ಷಿಗಳಿಗೆ ಅಕ್ಷಿ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಲಾಯಿತು.
ಕಂಕಣಧಾರಣೆ: ತದನಂತರ ದಸರಾದ ಮೊದಲ ದಿನದ ಸೂರ್ಯೋದಯದ ಹೊತ್ತಿಗೆ ಎಣ್ಣೆಶಾಸ್ತ್ರದ ಸ್ನಾನ ಮುಗಿಸಿದ ಯದುವೀರ ಅವರಿಗೆ ಅರಮನೆ ವಾಣಿವಿಲಾಸ ಅರಮನೆಯಲ್ಲಿ ಕಂಕಣಧಾರಣೆ ಮಾಡಲಾಯಿತು. ಬೆ.9.45ರ ಸುಮಾರಿಗೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುವಿನ ಆಗಮನವಾಯಿತು. ಅವುಗಳಿಗೆ ಪೂಜೆ ಅರ್ಪಿಸಲಾಯಿತು. ಕಳಸ ಪೂಜೆ, ಸಿಂಹಾಸನ ಪೂಜೆ ಬಳಿಕ ಯದುವೀರ ರತ್ನಖಚಿತ ಸಿಂಹಾಸನಾರೋಹಣ ಮಾಡುವ ಮುನ್ನ ಹಲವು ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಸಾಂಪ್ರದಾಯಿಕ ಪೋಷಾಕು ಧರಿಸಿದ್ದ ಪುರೋಹಿತರು, ಕಟ್ಟಿಗೆಯವರು, ಚೌಕಿದಾರರು, ದೀವಟಿಗೆ ಸಲಾಮಿನ ತಂಡ, ಶ್ವೇತ ವಸ್ತ್ರಧಾರಿಗಳಾಗಿದ್ದ ದರ್ಬಾರ್ ಭಕ್ಷಿಗಳ ಪರಿವಾರದೊಂದಿಗೆ ಯದುವೀರ ದರ್ಬಾರಿನ ಸ್ಥಳಕ್ಕೆ ರಂಗಪ್ರವೇಶ ಮಾಡಿದರು. ಆ ಹೊತ್ತಿಗೆ ಚೌಕದಾರರು, ಹೊಗಳುಭಟ್ಟರ ಬಹುಪರಾಕ್ ಘೋಷಣೆ ರಿಂಗಣಿಸಿದವು, ಚಾಮರಗಳು ಬೀಸಿದವು. ಚಿನ್ನದ ಬಣ್ಣದ ಪೋಷಾಕು, ರೇಷ್ಮೆ, ಮುತ್ತಿನ ಸರವಿದ್ದ ಕಿರೀಟ, ಕೈಗಳು, ಕೊರಳಿಗೆ ಆಭರಣ ಧರಿಸಿದ್ದ ಅವರು ರಾಜ ಗಾಂಭೀರ‌್ಯದಲ್ಲಿ ನಡೆದು ಬಂದರು.
ಅರಮನೆಯ ಪುರೋಹಿತರು, ಧರ್ಮಾಧಿಕಾರಿ ಮಾರ್ಗದರ್ಶನದಲ್ಲಿ ಯದುವೀರ ನವಗ್ರಹ ಪೂಜೆ ವಿವಿಧ ಪೂಜಾ ಕೈಂಕರ್ಯವನ್ನು ನಡೆಸಿದರು. ನಂತರ ಸ್ವರ್ಣ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ವಾದ್ಯಮೇಳದ ಸಂಗೀತ, ಪುರೋಹಿತರ ವೇದಘೋಷ, ಮಲ್ಲಿಗೆ ಹೂವಿನ ಪರಿಮಳ, ಹೊಗಳು ಭಟ್ಟರ ಘೋಷಣೆ ಮತ್ತೊಮ್ಮೆ ಮೊಳಗಿತು. ಈ ಹಿಮ್ಮೇಳದ ನಡುವೆ ಯದುವೀರ ಸಿಂಹಾಸನಕ್ಕೆ ಮೂರು ಪ್ರದಕ್ಷಿಣೆ ಹಾಕಿ ಸಿಂಹಾಸನರೋಹಣ ಮಾಡಿದರು. ಸಿಂಹಾಸನದಲ್ಲಿ ಮೇಲೆ ವಿರಾಜಮಾನರಾಗಿ ಗಮನ ಸೆಳೆದರು. ಈ ವೇಳೆ, ಜಯಚಾಮರಾಜ ಒಡೆಯರ್ ಅವರು ರಚಿಸಿರುವ ‘ಕಾಯೌ ಶ್ರೀಗೌರಿ’ ರಾಜಮನೆತನದ ಗೀತೆಯನ್ನು ಪೊಲೀಸ್ ವಾದ್ಯತಂಡ ನುಡಿಸಿತು.
ಬಳಿಕ ಅವರಿಗೆ ಪುರೋಹಿತ ವರ್ಗದವರು ಸುಗಂಧದ್ರವ್ಯ ಪ್ರೋಕ್ಷಣೆ ಮಾಡಿ, ಪುಷ್ಪಾರ್ಚನೆ ಮಾಡಿ ಶುಭ ಹಾರೈಸಿದರು. ಅರಮನೆಯ ಆವರಣದಲ್ಲಿರುವ ದೇವಾಲಯಗಳು, ಚಾಮುಂಡಿ ಬೆಟ್ಟ, ನಂಜನಗೂಡು, ಶಂಕರಮಠ ಸೇರಿದಂತೆ ಸುಮಾರು 18 ದೇವಾಲಯಗಳ ಪುರೋಹಿತರು ತೀರ್ಥ, ಪ್ರಸಾದ, ಹೂವು ನೀಡಿ, ಅಕ್ಷತೆಯನ್ನು ತಲೆಗೆ ಹಾಕಿ ಆಶೀರ್ವದಿಸಿದರು.
ಸರದಿ ಸಾಲಿನಲ್ಲಿ ಬಂದ ಸರದಾರ ಭಕ್ಷಿಗಳು, ಹೊಗಳುಭಟ್ಟರು, ದಿವಾನವರ್ಗದವರು, ದೀವಟಿಗೆಯ ಸಲಾಮಿನವರು, ಕಟ್ಟಿಗೆಯವರು, ರಕ್ಷಕ ಭಟರು ಸಲಾಮು ಸಲ್ಲಿಸಿದರು. ಸಿಂಹಾಸನದ ಮೇಲೆ ಎದ್ದು ನಿಂತು ಗೌರವ ವಂದನೆ ಸಲ್ಲಿಸುವ ಸಂದರ್ಭದಲ್ಲಿ ಮತ್ತೊಮ್ಮೆ ‘ಕಾಯೌ ಶ್ರೀಗೌರಿ’ ಗೀತಗಾಯನದೊಂದಿಗೆ ಬೆಳಗ್ಗಿನ ದರ್ಬಾರ್‌ಗೆ ತೆರೆ ಎಳೆಯಲಾಯಿತು. ಬಳಿಕ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಗೆ ಯದುವೀರ ತಲೆಬಾಗಿ ನಮಸ್ಕರಿಸಿದರು. ಯದುವೀರ ಅವರಿಗೆ ತ್ರಿಷಿಕಾಕುಮಾರಿ ಒಡೆಯರ್ ಪಾದಪೂಜೆ ಮಾಡಿದರು. ಪುತ್ರ ಆದ್ಯವೀರ ಕೂಡ ತಂದೆಯ ಪಾದಕ್ಕೆ ಪುಷ್ಪಾರ್ಚನೆ ನೆರವೇರಿಸಿದರು.
ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಮಧ್ಯಾಹ್ನ 2 ಗಂಟೆ ಬಳಿಕ ಅರಮನೆ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.
.