

ಅವಿನಾಶ್ ಜೈನಹಳ್ಳಿ ಮೈಸೂರು
ನಾಡಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿ ದಸರಾ ಆಚರಣೆ ಹಾಗೂ ಖಾಸಗಿ ದರ್ಬಾರ್‌ಗೆ ಸಿದ್ಧತೆ ಪ್ರಾರಂಭವಾಗಿದೆ. ಇದಕ್ಕೆ ಪೂರಕವಾಗಿ ಸೆ. 20ರಂದು ಸಿಂಹಾಸನ ಜೋಡಣೆ ಪ್ರಕ್ರಿಯೆ ನಡೆಯಲಿದೆ.
ಅಂಬಾವಿಲಾಸ ಅರಮನೆಯಲ್ಲಿ ಸೆ. 26ರಿಂದ ಖಾಸಗಿ ದರ್ಬಾರ್ ನಡೆಯಲಿದೆ. ಹೀಗಾಗಿ, ಅರಮನೆ ನೆಲಮಾಳಿಗೆಯ ಸ್ಟ್ರಾಂಗ್ ರೂಂನಿಂದ ರತ್ನಖಚಿತ ಸಿಂಹಾಸನವನ್ನು ಪೊಲೀಸ್ ಬಿಗಿಭದ್ರತೆಯಲ್ಲಿ ಹೊರತೆಗೆದು ದರ್ಬಾರ್ ಹಾಲ್‌ನಲ್ಲಿ ಜೋಡಿಸಲಾಗುತ್ತದೆ. ಅಕ್ಟೋಬರ್ 20 ರಂದು ಸಿಂಹಾಸನ ವಿಸರ್ಜನೆ ಕಾರ್ಯ ನಡೆಯಲಿದೆ.
ಅಪ್ಪಟ ಚಿನ್ನದಿಂದ ತಯಾರಿಸಿದ, ಶತಮಾನಗಳ ಇತಿಹಾಸವಿರುವ ರತ್ನಖಚಿತ ಸಿಂಹಾಸನವನ್ನು ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಏರುವ ಮೂಲಕ ಖಾಸಗಿ ದರ್ಬಾರ್ ನಡೆಸುವರು. ನವರಾತ್ರಿ ದಿನಗಳಂದು ಹಲವು ಆಚರಣೆಗಳು ಅರಮನೆ ಆವರಣ ಹಾಗೂ ಖಾಸಗಿ ದರ್ಬಾರ್‌ನಲ್ಲಿ ನಡೆಯಲಿವೆ.
ವಿವಿಧ ಧಾರ್ಮಿಕ ಕಾರ್ಯ:
ಸಿಂಹಾಸನದ ಜೋಡಣೆಗೂ ಮುನ್ನ ಸೆ. 20ರಂದು ಬೆಳಗ್ಗೆ 6.30ರಿಂದ ವಿವಿಧ ಧಾರ್ಮಿಕ ಕಾರ್ಯಗಳು ಅರಮನೆ ಪಂಚಾಂಗದಂತೆ ನಡೆಯಲಿವೆ. ಗಣಪತಿ ಹೋಮ, ಚಾಮುಂಡೇಶ್ವರಿ ಪೂಜೆ, ಶಾಂತಿಹೋಮ ಸೇರಿದಂತೆ ವಿವಿಧ ಪೂಜೆಗಳು ಜರುಗಲಿವೆ.
ಬೆಳಗ್ಗೆ 8.30ರಿಂದ 12.30ರೊಳಗೆ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನದ ಜೋಡಣೆ ಪ್ರಕ್ರಿಯೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಜಿಲ್ಲಾಡಳಿತದ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಲಿದೆ. ಭದ್ರತಾ ದೃಷ್ಟಿಯಿಂದ ಸಿಂಹಾಸನ ಜೋಡಣೆ ಸಂದರ್ಭ ಅರಮನೆ ಸಿಬ್ಬಂದಿಗೂ ಅರಮನೆಯ ಒಳಗೆ ಪ್ರವೇಶ ಇರುವುದಿಲ್ಲ. ಅಲ್ಲದೆ, ಎಲ್ಲ ಸಿಬ್ಬಂದಿ ಮೊಬೈಲ್ ಫೋನ್‌ಗಳನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಬೇಕು. ಸಿಂಹಾಸನ ಜೋಡಣೆ ನಂತರ ಅದನ್ನು ಬಿಳಿ ಪರದೆಯಿಂದ ಮುಚ್ಚಲಾಗುತ್ತದೆ.
ಜೋಡಣೆ ಹೇಗೆ?:
ಅರಮನೆಯ ಭದ್ರಕೋಣೆಯಲ್ಲಿ ಸಿಂಹಾಸನ ಇರಿಸಲಾಗಿರುತ್ತದೆ. ಕೋಣೆಯ ತಲಾ ಒಂದು ಕೀ ಅರಮನೆ ಆಡಳಿತ ಮಂಡಳಿ ಹಾಗೂ ರಾಜವಂಶಸ್ಥರ ಬಳಿ ಇರುತ್ತದೆ. ಉಭಯರ ಸಮ್ಮುಖದಲ್ಲಿ ಸಿಂಹಾಸನವನ್ನು ಹೊರ ತೆಗೆದು, ಟ್ರಾಲಿ ಮೂಲಕ ದರ್ಬಾರ್ ಹಾಲ್‌ಗೆ ತರಲಾಗುವುದು. ಇದಕ್ಕೂ ಮುನ್ನ ಈ ಸಭಾಂಗಣವನ್ನು ಸ್ವಚ್ಛಗೊಳಿಸಲಾಗುವುದು.
ಈ ಸಿಂಹಾಸನದಲ್ಲಿ ಮೂರು ಭಾಗಗಳಿವೆ. ಒಂದು ಮುಖ್ಯ ಆಸನ, ಇನ್ನೊಂದು ಮೆಟ್ಟಿಲು ಮತ್ತು ಬಂಗಾರದ ಛತ್ರಿಯಿದೆ. ಮೂಲತಃ ಅಂಜೂರ ಮರದಿಂದ ತಯಾರಿಸಲಾಗಿರುವ ಈ ರಾಜಗದ್ದುಗೆಗೆ ಆನೆಯ ದಂತದ ಪಟ್ಟಿಗಳನ್ನು ಅಳವಡಿಸಲಾಗಿದೆ. ಈ ಭಾಗಗಳನ್ನು ಬೇರ್ಪಡಿಸಿ ಮತ್ತೆ ಜೋಡಣೆ ಮಾಡುವ ತಾಂತ್ರಿಕತೆ ಇದಕ್ಕೆ ಇದೆ. ಇದರ ಜೋಡಣೆ ಕಾಯಕವೂ ಒಂದು ಕಲೆಯಾಗಿದೆ.
ರಾಜಮನೆತನದವರ ನವರಾತ್ರಿ ಉತ್ಸವದ ಧಾರ್ಮಿಕ ಆಚರಣೆಗಾಗಿ ಅಂಬಾವಿಲಾಸ ಅರಮನೆಯಲ್ಲಿ ಈ ಸಿಂಹಾಸನವನ್ನು ಜೋಡಿಸುವುದೇ ಒಂದು ಸಾಹಸ. ಶತಮಾನಗಳಿಂದಲೂ ರಾಜ ಮಹಾರಾಜರು ಇದೇ ಸಿಂಹಾಸನಾರೂಢರಾಗಿ ನವರಾತ್ರಿಯ ದಿನ ಖಾಸಗಿ ದರ್ಬಾರು ನಡೆಸಿಕೊಂಡು ಬಂದಿದ್ದಾರೆ. ರಾಜಪ್ರಭುತ್ವ ಅಳಿದು ಪ್ರಜಾ ಸರ್ಕಾರ ಅಸ್ತಿತ್ವಕ್ಕೆ ಬಂದಿರುವ ಈ ದಿನಗಳಲ್ಲೂ ಅರಮನೆಯಲ್ಲಿ ಸಾಂಪ್ರದಾಯಿಕ ಪದ್ಧತಿಗಳನ್ನು ಕೈಬಿಟ್ಟಿಲ್ಲ. ರಾಜವಂಶಸ್ಥರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಇದೇ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸುತ್ತಾರೆ.
ಗೆಜ್ಜಗಳ್ಳಿ ಗ್ರಾಮಸ್ಥರು ಸಿದ್ಧಹಸ್ತರು:
ರತ್ನಖಚಿತ ಸ್ವರ್ಣ ಸಿಂಹಾಸನ ನೋಡುವುದು ಕಣ್ಣಿಗೆಷ್ಟು ಹಬ್ಬವೋ, ಅದನ್ನು ಜೋಡಿಸುವುದೂ ಅಷ್ಟೇ ನಾಜೂಕಿನ ಕೆಲಸ. ಈ ಕೆಲಸದಲ್ಲಿ ಗೆಜ್ಜಗಳ್ಳಿ ಗ್ರಾಮಸ್ಥರು ಸಿದ್ಧಹಸ್ತರು. ಅದಕ್ಕಾಗಿಯೇ ರಾಜ ಮಹಾರಾಜರ ಕಾಲದಿಂದಲೂ ನವರಾತ್ರಿ ಆರಂಭಕ್ಕೂ ಮೂರು ತಿಂಗಳ ಮೊದಲೇ ಅರಮನೆಯಿಂದ ಪರಿಚಾರಕರು ಗೆಜ್ಜಗಳ್ಳಿಗೆ ಹೋಗಿ ವೀಳ್ಯ ಕೊಟ್ಟು ಆಹ್ವಾನ ನೀಡಿ ಬರುತ್ತಿದ್ದರು. ರಾಜ ಪುರೋಹಿತರು ನಿಗದಿಪಡಿಸಿದ ಶುಭ ಮುಹೂರ್ತದಲ್ಲಿ ಗೆಜ್ಜಗಳ್ಳಿಯ ಗ್ರಾಮಸ್ಥರು ಬಂದು ಸ್ವರ್ಣ ಸಿಂಹಾಸನವನ್ನು ಜೋಡಿಸಿ ಹೋಗುತ್ತಿದ್ದರು. ಸಿಂಹಾಸನ ಜೋಡಣೆಗೆ ಬರುವ ಗೆಜ್ಜಗಳ್ಳಿಯ ಜನರಿಗೆ ರಾಜಮರ್ಯಾದೆ ನೀಡಿ, ಭಕ್ಷೀಸು ಕೊಟ್ಟು, ಕಳುಹಿಸಲಾಗುತ್ತಿತ್ತು. ಆದರೆ, ಕಳೆದ ಕೆಲ ವರ್ಷಗಳಿಂದ ಗೆಜ್ಜಗಳ್ಳಿ ಗ್ರಾಮಸ್ಥರು ಹೆಚ್ಚಾಗಿ ಬರುತ್ತಿಲ್ಲ. ಬದಲಿಗೆ ಅರಮನೆ ಸಿಬ್ಬಂದಿಯೇ ಸಿಂಹಾಸನ ಜೋಡಿಸುತ್ತಿದ್ದಾರೆ. ಆ ಸಿಬ್ಬಂದಿಯಲ್ಲಿ ಕೆಲವರು ಗೆಜ್ಜಗಳ್ಳಿಯವರು ಎನ್ನುವುದು ವಿಶೇಷ.
ಮಣ್ಣಲ್ಲಿ ಹೂತಿದ್ದ ಸಿಂಹಾಸನ:
ಅರಮನೆಯಲ್ಲಿರುವ ರತ್ನಖಚಿತ ಸಿಂಹಾಸನಕ್ಕೆ ಪೌರಾಣಿಕ, ಚಾರಿತ್ರಿಕ ಸ್ಪರ್ಶವೂ ಇದೆ. ಇದನ್ನು ಪಾಂಡವರ ಕಾಲದ್ದೆಂದು ಹೇಳಲಾಗುತ್ತದೆ. ಕಂಪುಲ ರಾಜನು ಇದನ್ನು ಪೆನಗೊಂಡದಲ್ಲಿ ಹೂತಿಟ್ಟಾಗ ವಿದ್ಯಾರಣ್ಯರ ದಿವ್ಯದೃಷ್ಟಿಗೆ ಈ ಸಿಂಹಾಸನ ಗೋಚರವಾಗುತ್ತದೆ. ವಿಜಯನಗರವನ್ನು ಸ್ಥಾಪಿಸಿದ್ದ ಹರಿಹರನಿಗೆ ಅವರು ಈ ವಿಚಾರವನ್ನು ಮುಟ್ಟಿಸಿ, ಅದನ್ನು ಹೊರತೆಗೆಯಲಾಯಿತು ಎನ್ನುತ್ತದೆ ಇತಿಹಾಸ. ನಂತರ ಈ ಸಿಂಹಾಸನ ಆನೆಗೊಂದಿಯಲ್ಲಿ 150 ವರ್ಷವಿದ್ದು, ಯಾವಾಗ ವಿಜಯನಗರ ಸಾಮ್ರಾಜ್ಯ ಪತನವಾಯಿತೋ, ಆಗ ಶ್ರೀರಂಗಪಟ್ಟಣದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಯಭಾರಿಗೆ ಒಲಿಯಿತು. ರಾಜ ಒಡೆಯರ್, ಶ್ರೀರಂಗಪಟ್ಟಣವನ್ನು ತಮ್ಮ ವಶಕ್ಕೆ ತೆಗೆದುಕೊಂಡಾಗ, ಸಿಂಹಾಸನ ಮೈಸೂರಿನ ಅರಮನೆ ಪಾಲಾಯಿತು ಎನ್ನುವುದು ಚರಿತ್ರೆಯ ದಾಖಲೆಗಳಲ್ಲಿ ಉಲ್ಲೇಖವಾದ ಕತೆ.
ಸಿಂಹಾಸನ ಜೋಡಣೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಸೆ. 20ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಜತೆಗೆ, ಖಾಸಗಿ ದರ್ಬಾರ್ ಹಿನ್ನೆಲೆಯಲ್ಲಿ ಸೆ. 26ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ, ಆಯುಧ ಪೂಜೆ ಪ್ರಯುಕ್ತ ಅ. 4ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ, ವಿಜಯದಶಮಿ ಪ್ರಯುಕ್ತ ಅ. 5ರಂದು ಇಡೀ ದಿನ ಹಾಗೂ ಸಿಂಹಾಸನ ವಿಸರ್ಜನೆ ಪ್ರಯುಕ್ತ ಅ. 20ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.ಟಿ.ಎಸ್.ಸುಬ್ರಹ್ಮಣ್ಯ, ಮೈಸೂರು ಅರಮನೆ ಮಂಡಳಿ ಉಪನಿರ್ದೇಶಕ