

ದೇವದುರ್ಗ: ಸಾಂಕ್ರಾಮಿಕ ರೋಗಗಳ ಬಗ್ಗೆ ಪ್ರತಿಯೊಬ್ಬ ವೈದ್ಯ ಜಾಗೃತಿ ಮೂಡಿಸಬೇಕು. ಅಭಿಯಾನಕ್ಕೆ ಖಾಸಗಿ ವೈದ್ಯರೂ ಕೈಜೋಡಿಸಬೇಕು ಎಂದು ಬಿಡಿಸಿಪಿ ಅಧಿಕಾರಿ ಡಾ.ಎನ್.ವಿ.ಚಂದ್ರಶೇಖರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ಖಾಸಗಿ ಆಸ್ಪತ್ರೆ ವೈದ್ಯರು, ಪ್ರಯೋಗಶಾಲಾ ತಂತ್ರಜ್ಞರ ಜತೆ ಮಲೇರಿಯಾ ಕುರಿತು ಸಂವಾದ ಕಾರ್ಯಾಗಾರದಲ್ಲಿ ಶನಿವಾರ ಮಾತನಾಡಿದರು.
ಸೊಳ್ಳೆ ಕಡಿತದಿಂದ ಹರಡುವ ಮಲೇರಿಯಾ, ಡೆಂಘೆ, ಚಿಕೂನ್‌ಗುನ್ಯಾ, ಮಿದುಳುಜ್ವರ ಮತ್ತು ಆನೆಕಾಲು ರೋಗದ ಬಗ್ಗೆ ಎಲ್ಲರಿಗೂ ಸಾಮಾನ್ಯ ತಿಳಿವಳಿಕೆ ಅಗತ್ಯವಾಗಿದೆ. ಖಾಸಗಿ ವೈದ್ಯರು ಸಾಂಕ್ರಾಮಿಕ ರೋಗಗಳ ಬಗ್ಗೆ ಚಿಕಿತ್ಸೆ ನೀಡುವ ಜತೆಗೆ ಜನರಿಗೆ ಅರಿವು ಮೂಡಿಸಬೇಕು ಎಂದರು.
ಟಿಎಚ್‌ಒ ಡಾ.ಬನದೇಶ್ವರ ಗಬ್ಬೂರು ಮಾತನಾಡಿ, ಜ್ವರ ಪ್ರಕರಣಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಒಂದು ವಾಟ್ಸಾೃಪ್ ಗ್ರೂಪ್ ಮಾಡಬೇಕು. ಆ ಗುಂಪಿನಲ್ಲಿ ಜ್ವರ ಪ್ರಕರಣ ಕಂಡುಬಂದಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಬೇರೆಯವರಿಗೆ ಹರಡದಂತೆ ಸರ್ವೇ ಮಾಡಿ ಮತ್ತು ಆರೋಗ್ಯ ಶಿಕ್ಷಣ ನೀಡಬೇಕು ಎಂದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಕುಮಾರ್ ನಾರಾ, ವೈದ್ಯರಾದ ರಾಜೇಂದ್ರ ಜಾಗೀರದಾರ್, ರವಿಕುಮಾರ್ ಉಬಾಳೆ, ನಾಗರಾಜ್ ತಾಳಿಕೋಟೆ, ಸಾಬಣ್ಣ ನಾಯಕ, ಮಂಜುನಾಥ ಬೆನಕನ್, ಮಲ್ಲನಗೌಡ, ಗಂಗಾಧರ್, ಶಿವಕುಮಾರ್ ದೇಸಾಯಿ, ಶ್ರುತಿ, ನಿರ್ಮಲಾದೇವಿ, ತ್ಯಾಗರಾಜ್ ಹಾಗೂ ಗೀತಮ್ಮ, ಓಂಕಾರ, ಚನ್ನಬಸಯ್ಯ ಸೋಮಪ್ಪ ಇದ್ದರು.