ಬೀಜ ಖರೀದಿಗೆ ನಿಯಮ ಹೇರಿಕೆ

Untitled design(8)
Published on

ಕನಕಗಿರಿ: ಉತ್ತಮ ಲಾಭಕ್ಕಾಗಿ ಬೀಜೊತ್ಪಾದನೆಯ ಹತ್ತಿ ಬೆಳೆಯಿರಿ ಎಂಬುದಾಗಿ ರೈತರನ್ನು ಪ್ರೇರೇಪಿಸಿ ಖಾಸಗಿ ಕಂಪನಿ ಲಕ್ಷಾಂತರ ರೂ. ಖರ್ಚು ಮಾಡಿಸಿದೆ. ಇದೀಗ ಬೀಜ ಖರೀದಿಗೆ ನಿಯಮಗಳನ್ನು ಹೇರಿ ನಷ್ಟಕ್ಕೆ ದಾರಿ ಮಾಡಿರುವುದು ಕೃಷಿಕರಲ್ಲಿ ಆತಂಕ ಮೂಡಿಸಿದೆ.

ಕನಕಗಿರಿ ತಾಲೂಕು ಬಹುತೇಕ ಒಣ ಬೇಸಾಯ ಪ್ರದೇಶವಾಗಿದೆ. ಕೆಲವೇ ರೈತರು ಬೋರ್‌ವೆಲ್‌ನಿಂದ ನೀರಾವರಿ ಬೇಸಾಯ ಮಾಡುತ್ತಿದ್ದಾರೆ. ಕಳೆದ ಎರಡು ವರ್ಷಗಳಿಂದ ಬೀಜದ ಕೆಲ ಖಾಸಗಿ ಕಂಪನಿಗಳು ಈ ಭಾಗಕ್ಕೆ ದಾಂಗುಡಿ ಇಟ್ಟಿವೆ. ರೈತರಿಗೆ ಲಾಭದ ಆಸೆ ತೋರಿಸಿವೆ. ಇದರಿಂದ ಕಳೆದ ವರ್ಷ ತಾಲೂಕಿನ ಮಲ್ಲಿಗೆವಾಡ, ಹನುಮನಾಳ, ಕನಕಾಪುರ, ಹಿರೇಖೇಡ, ಚಿಕ್ಕಖೇಡ, ವಡಕಿ, ಗೌರಿಪುರ, ಗೋಡಿನಾಳ ಗ್ರಾಮಗಳಲ್ಲಿ ರೈತರು ಬೆಳೆದ ಬೀಜೊತ್ಪಾದನೆಯ ಹತ್ತಿ ಬೀಜವನ್ನು ಕ್ವಿಂಟಾಲ್‌ಗೆ 48 ಸಾವಿರ ರೂ.ನಂತೆ ಖರೀದಿ ಮಾಡಿವೆ ಎನ್ನಲಾಗಿದೆ.

ಪ್ರತಿ ಎಕರೆಗೆ ಕನಿಷ್ಠ 5-6 ಕ್ವಿಂಟಾಲ್ ಹತ್ತಿ ಬೀಜ ಬೆಳೆದ ರೈತರು ಮಾರಾಟ ಮಾಡಿ ಉತ್ತಮ ಲಾಭ ಗಳಿಸಿದ್ದಾರೆ. ಇದು ಇನ್ನಷ್ಟು ರೈತರು ಈ ಬೆಳೆಯತ್ತ ವಾಲುವುದಕ್ಕೆ ಪ್ರೇರಣೆಯಾಗಿದೆ. ಹೀಗಾಗಿ ಈ ವರ್ಷವೂ ಖಾಸಗಿ ಕಂಪನಿಗಳೊಂದಿಗೆ ಅಗ್ರಿಮೆಂಟ್ ಮಾಡಿಕೊಳ್ಳದೇ ಮೌಖಿಕವಾಗಿಯೇ ಒಪ್ಪಂದ ಮಾಡಿಕೊಂಡು ಬೀಜೋತ್ಪಾದನೆಯ ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಇದರಿಂದ ತಾಲೂಕಿನಲ್ಲಿ ಕೃಷಿ ಇಲಾಖೆ ಸರ್ವೇ ಪ್ರಕಾರ 5,335 ಎಕರೆ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗಿದೆ.

ಕಂಪನಿಗಳು ನೀಡಿರುವ ಬೀಜ ಬಿತ್ತನೆ ಮಾಡಿ 2 ತಿಂಗಳಿನ ಗಿಡಗಳಿವೆ. ರೈತರು ನಾ ಮುಂದು ತಾ ಮುಂದು ಎನ್ನುವಂತೆ ನಾನಾ ಗ್ರಾಮಗಳಿಂದ ಕೂಲಿ ಕಾರ್ಮಿಕರನ್ನು ಕರೆತಂದು ಹತ್ತಿ ಕ್ರಾಸ್ ಮಾಡಿಸಿದ್ದಾರೆ. ಇನ್ನೇನು ಎರಡ್ಮೂರು ತಿಂಗಳಲ್ಲಿ ಲಾಭ ಕಾಣುತ್ತೇವೆ ಎನ್ನುವಷ್ಟರಲ್ಲೇ ಖಾಸಗಿ ಕಂಪನಿಗಳು ಇದೀಗ ಇಲ್ಲದ ನಿಯಮಗಳನ್ನು ಹೇರಿದ್ದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಸ್ಪಷ್ಟವಾಗಿ ಕೇಳೋಣ ಎಂದರೆ, ಜಮೀನುಗಳಿಗೆ ಭೇಟಿ ನೀಡಿ ಸಲಹೆ ನೀಡುತ್ತಿದ್ದ ಕಂಪನಿಗಳ ಮಾಲೀಕರು, ಸೂಪರ್‌ವೈಸರ್‌ಗಳು ನಾಪತ್ತೆಯಾಗಿದ್ದಾರೆ. ಫೋನ್ ಕರೆಗೂ ಸಿಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬಂದಿವೆ.

ಇದು ರೈತರನ್ನು ಇನ್ನಷ್ಟು ಕಂಗಾಲಾಗುವಂತೆ ಮಾಡಿದೆ. ಹತ್ತಿ ಬೀಜೋತ್ಪಾದನೆಗಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಕಂಪನಿಗಳು ಕೈಕೊಟ್ಟಿದ್ದರಿಂದ ಏನು ಮಾಡಬೇಕೆಂದು ತೋಚದೆ ರೈತರು ಕಂಗಾಲಾಗಿದ್ದಾರೆ. ಕೆಲವರು ಹರಗಿ ಬೆಳೆ ನಾಶಪಡಿಸಿದರೆ, ಕುರಿ ತಿನ್ನಿಸಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆತಂಕದಲ್ಲಿರುವ ರೈತರು ಸಚಿವ ಶಿವರಾಜ ತಂಗಡಗಿಗೆ ಖಾಸಗಿ ಕಂಪನಿ ವಿರುದ್ಧ ಕ್ರಮ ಕೈಗೊಂಡು ಆತಂಕದಿಂದ ಪಾರು ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಕೃಷಿ ಇಲಾಖೆಯು ಗಂಗಾವತಿಯಲ್ಲಿ ಜೂ.26ರಂದು ಕಂಪನಿಯವರನ್ನು ಕರೆಯಿಸಿ ಸಭೆ ನಡೆಸಿದ್ದು, ಎಷ್ಟರ ಮಟ್ಟಿಗೆ ಫಲ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

==============

((ಕೋಟ್))

ಖಾಸಗಿ ಕಂಪನಿಗಳ ನಿಯಮ ಹೇರಿಕೆಯಿಂದ ರೈತರು ಅತಂತ್ರರಾಗಿದ್ದಾರೆ. ಬೀಜೊತ್ಪಾದನೆಯ ಹತ್ತಿ ಬೆಳೆದ ರೈತರ ಸಂಕಷ್ಟವನ್ನು ಪಾರು ಮಾಡಲು ಸಚಿವರಿಗೆ ಮನವಿ ಸಲ್ಲಿಸಿದ್ದು, ಸ್ಪಂದಿಸುವುದಾಗಿ ಭರವಸೆ ನೀಡಿದ್ದಾರೆ. ಇಲಾಖೆ ನಡೆಸಿದ ಸಭೆಯಲ್ಲಿ ಕಂಪನಿಗಳು ರೈತರು ಬೆಳೆದಷ್ಟು ಖರೀದಿಸಲು ಒಪ್ಪಿಕೊಂಡಿವೆ. ಯಾರು ಬೆಳೆ ನಾಶಕ್ಕೆ ಮುಂದಾಗಬಾರದು.

ಮುದಿಯಪ್ಪ ನಾಯಕ

ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾಧ್ಯಕ್ಷ

==========

((ಕೋಟ್))

ಖಾಸಗಿ ಕಂಪನಿಗಳು ಸಭೆಯಲ್ಲಿ ಖರೀದಿಸುವುದಾಗಿ ಭರವಸೆ ನೀಡಿವೆ. ಆದರೆ, ಪ್ರತಿ ವರ್ಷದಂತೆ ಕೃಷಿ ಚಟುವಟಿಕೆಗೆ ನೀಡುತ್ತಿದ್ದ ವೆಚ್ಚವನ್ನು ನೀಡಬೇಕು. ಈ ಬಗ್ಗೆ ಕರಾರು ಆಗಬೇಕು ಎಂಬುದು ರೈತರ ಆಗ್ರಹವಾಗಿದೆ. ಜೂ.30 ರಂದು ತಿಳಿಸುವುದಾಗಿ ಕಂಪನಿಯವರು ತಿಳಿಸಿದ್ದಾರೆ.

ಶರಣಪ್ಪ ಗದ್ದಿ

ಕರಾರೈ ಸಂಘ, ಜಿಲ್ಲಾ ಕಾರ್ಯದರ್ಶಿ

==============

((ಕೋಟ್))

ರೈತರ ಆತಂಕಕ್ಕೆ ಕಾರಣವಾಗಿದ್ದನ್ನು ದೂರ ಮಾಡಲು ಕಂಪನಿಗಳ ಮುಖ್ಯಸ್ಥರು, ರೈತರ ಸಭೆ ಮಾಡಲಾಗಿದೆ. ಮುಖ್ಯ ಖಾಸಗಿ ಕಂಪನಿಗಳು ರೈತರು ಬೆಳೆದ ಬೀಜಗಳನ್ನು ಖರೀದಿಸಲು ಒಪ್ಪಿಕೊಂಡಿವೆ. ಅಗ್ರಿಮೆಂಟ್ ಮಾಡಿಕೊಂಡು ಮುಂದುವರಿಯಲು ಕಂಪನಿಯವರಿಗೆ ಸೂಚಿಸಲಾಗಿದೆ.

ಸಂತೋಷ ಪಟ್ಟದಕಲ್

ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net