ಮೈಸೂರು: ವಿದ್ಯುತ್ ಉತ್ಪಾದನೆ ನೆಪದಲ್ಲಿ ಖಾಸಗಿ ಕಂಪನಿ ಕೇಂದ್ರ ಸ್ಥಾಪಿಸಲು ಅಗತ್ಯಕ್ಕಿಂತ ಹೆಚ್ಚಿನ ಭೂಮಿಯನ್ನು ರೈತರಿಂದ ಆಕ್ರಮಿಸಿಕೊಳ್ಳುವ ಮೂಲಕ ಸರ್ಕಾರ ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುತ್ತಿದೆ ಎಂದು ಬೆಂಗಳೂರಿನ ಕನ್ನಡಿಗರ ರಕ್ಷಣಾ ವೇದಿಕೆ ಆರೋಪಿಸಿದೆ.
ಎಚ್.ಡಿ.ಕೋಟೆ ಕಬಿನಿ ಹಿನ್ನೀರಿನ ಬಳಿ ಕಂಪನಿ ತನಗೆ ಅನುಕೂಲವಾಗುವಂತೆ ಬೇರೆ ಬೇರೆ ಹೆಸರಿನಲ್ಲಿ ಘಟಕ ಸ್ಥಾಪಿಸಿಕೊಂಡು ವಂಚನೆ ಮಾಡುತ್ತಿದೆ. ಈ ಅಕ್ರಮದಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ವೇದಿಕೆ ಅಧ್ಯಕ್ಷ ವಿಕ್ರಂ ಗಂಗಾಧರ್ ದೂರಿದರು.
ಇದೇ ವೇಳೆ ಕಬಿನಿ ಹಿನ್ನೀರು ಭಾಗದಲ್ಲಿ ಹಲವಾರು ರೆಸಾರ್ಟ್‌ಗಳು ಅಕ್ರಮವಾಗಿ ತಲೆಯೆತ್ತಿವೆ. ಇದರಿಂದ ಪ್ರಾಣಿ ಸಂಕುಲ, ಸಸ್ಯ ಸಂಕುಲಕ್ಕೆ ಸಮಸ್ಯೆ ಎದುರಾಗಿದೆ. ಈ ಕುರಿತು ಸ್ಥಳೀಯ ತಹಸೀಲ್ದಾರ್, ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಲಿದ್ದೇವೆ ಎಂದರು. ಪದಾಧಿಕಾರಿಗಳಾದ ನಾಗೇಶ್, ಶಿವಕುಮಾರ್, ಎಸ್.ದೊರೆಸ್ವಾಮಿ, ರೇಣುಕಾ ಪ್ರಸಾದ್ ಇತರರು ಇದ್ದರು.