

ದೇವದುರ್ಗ: ಶಾಲಾ ವಾಹನ ಅಪಘಾತದಲ್ಲಿ ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಖಾಸಗಿ ಶಾಲೆ ಆಡಳಿತ ಮಂಡಳಿಯ ಬೇಜವಾಬ್ದಾರಿ ತೋರಿಸುತ್ತಿದೆ. ಇಂಥ ಘಟನೆಗಳು ಮರುಕಳಿಸದಂತೆ ಎಲ್ಲ ಖಾಸಗಿ ವಾಹನಗಳ ತಪಾಸಣೆ ಮಾಡಬೇಕು ಎಂದು ಗಬ್ಬೂರಿನಲ್ಲಿ ನಾಡ ತಹಸೀಲ್ದಾರ್ ಬಸವರಾಜಗೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಶನಿವಾರ ಮನವಿ ಸಲ್ಲಿಸಿತು.
ರಾಜ್ಯದಲ್ಲಿ ನಾಯಿ ಕೊಡೆಗಳಂತೆ ಖಾಸಗಿ ಶಿಕ್ಷಣ ಸಂಸ್ಥೆಗಳು ತಲೆಎತ್ತಿದ್ದು ಪಾಲಕರಿಂದ ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಆದರೆ, ಮಕ್ಕಳಿಗೆ ಗುಣಮಟ್ಟದ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿವೆ. ಮಕ್ಕಳನ್ನು ಕರೆತರುವ ಬಹುತೇಕ ಖಾಸಗಿ ಶಾಲಾ ವಾಹನಗಳು ನಿಯಮ ಪಾಲನೆ ಮಾಡುತ್ತಿಲ್ಲ. ಹಳೇ ವಾಹನಗಳು, ಅನುಭವ ಇಲ್ಲದ ಚಾಲಕರಿಂದ ಅವಘಡಗಳು ನಡೆಯುತ್ತಿವೆ.
ಮಾನ್ವಿಯಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿಯಾಗಿದೆ. ಕೂಡಲೇ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳ ವಾಹನ ತಪಾಸಣೆ ಮಾಡಬೇಕು. ನುರಿತ ಚಾಲಕರನ್ನು ನೇಮಿಸಿಕೊಳ್ಳಬೇಕು.
ಖಾಸಗಿ ಶಾಲೆಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಘಟನೆಯಲ್ಲಿ ಮೃತಪಟ್ಟ ಮಕ್ಕಳ ಕುಟುಂಬಕ್ಕೆ 20ಲಕ್ಷ ರೂ. ಗಾಯಗೊಂಡ ಮಕ್ಕಳಿಗೆ 10ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.