

ತುಮಕೂರು: ಕರೊನಾಘಾತದಿಂದ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್‌ಗಳು ಮತ್ತೆ ರಸ್ತೆಗಳಲ್ಲಿ ಕಾಣಿಸಿಕೊಂಡಿವೆ. ಹಂತ ಹಂತವಾಗಿ ಸಂಚಾರ ಪುನರಾರಂಭಿಸಿರುವ ಖಾಸಗಿ ಬಸ್‌ಗಳು ಪ್ರಯಾಣಿಕರ ಕೊರತೆ ಅನುಭವಿಸುವಂತಾಗಿದೆ.
ಈ ಮಧ್ಯೆ ಆಗಸ್ಟ್ 1 ರಿಂದ ಜಾರಿಗೆ ಬರುವಂತೆ ಖಾಸಗಿ ಬಸ್ ಪ್ರಯಾಣ ದರವನ್ನು ಸಾರಿಗೆ ಇಲಾಖೆ ಪರಿಷ್ಕರಣೆ ಮಾಡಿರುವುದು ನಷ್ಟಕ್ಕೆ ತುತ್ತಾಗಿರುವ ಬಸ್ ಮಾಲೀಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಡೀಸೆಲ್ ದರ ಗಗನಮುಖಿಯಾಗಿರುವಾಗ ಹೊಸ ಮಾರ್ಗಸೂಚಿ ಅನ್ವಯದಂತೆ ಪ್ರತೀ ಬಸ್‌ನಲ್ಲಿ 30 ಪ್ರಯಾಣಿಕರಿಗೆ ಅವಕಾಶ ಇರುವುದರಿಂದ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ. ಸಾರಿಗೆ ಬಸ್ ದರ ಪೈಪೋಟಿಯ ನಡುವೆ ಈಗ ಖಾಸಗಿ ಬಸ್ ದರನ್ನು ಶೇ.15 ಹೆಚ್ಚಳ ಮಾಡಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯಲ್ಲಿ ಈಗ ತುಮಕೂರು-ಮಧುಗಿರಿ, ತುಮಕೂರು-ಕುಣಿಗಲ್ ಮಾರ್ಗಮಧ್ಯೆ ಖಾಸಗಿ ಬಸ್ ಸಂಚಾರ ಆರಂಭಿಸಿವೆ. ಆ.3ರಿಂದ ತುಮಕೂರಿಂದ ಕುಣಿಗಲ್, ಮಧುಗಿರಿ, ಚೇಳೂರು, ಊರ್ಡಿಗೆರೆ, ಕೋಳಾಲ ಮಾರ್ಗದ ಮಧ್ಯೆ 15 ಖಾಸಗಿ ಬಸ್ ಸಂಚಾರ ಆರಂಭಿಸಿದ್ದು ಕೋವಿಡ್ ಮಾರ್ಗಸೂಚಿ ಅನುಸರಿಸಲಾಗುತ್ತಿದೆ. ಆದರೆ, ಬಸ್‌ಗಳಲ್ಲಿ ಪ್ರಯಾಣಿಸಲು ಜನ ಹಿಂದು ಮುಂದೆ ನೋಡುತ್ತಿದ್ದಾರೆ.
ಪ್ರಯಾಣ ದರ ಹೆಚ್ಚಳ: ಈ ಮಧ್ಯೆ 2013ರ ಬಳಿಕ ಸರ್ಕಾರವು ಖಾಸಗಿ ಬಸ್‌ಗಳ ಪ್ರಯಾಣ ದರ ಪರಿಷ್ಕರಿಸಿದೆ. ಇದರಿಂದಾಗಿ ಖಾಸಗಿ ಮಜಲು ಬಸ್‌ಗಳ ಕನಿಷ್ಠ ಪ್ರಯಾಣ ದರ ಮೊದಲ ಹಂತಕ್ಕೆ (6.5 ಕಿ.ಮೀ) 9 ರೂಪಾಯಿ 50 ಪೈಸೆ, ನಂತರದ ಪ್ರತಿ ಕಿಲೋ ಮೀಟರ್‌ಗೆ 1 ರೂ., ದರ ನಿಗದಿಪಡಿಸಿದೆ. ಇನ್ನೂ ಎಕ್ಸ್‌ಪ್ರೆಸ್ ಸರ್ವೀಸ್‌ನಲ್ಲಿ ಮೊದಲ ಹಂತಕ್ಕೆ ಕನಿಷ್ಠ ಪ್ರಯಾಣ ದರ 10 ರೂ., ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ 1 ರೂಪಾಯಿ 10ಪೈಸೆ ನಿಗದಿಗೊಳಿಸಿದೆ. ಶೇ.15 ಬಸ್ ಪ್ರಯಾಣ ದರ ಹೆಚ್ಚಳ ಹಿನ್ನೆಲೆಯಲ್ಲಿ ತುಮಕೂರು-ಪಾವಗಡಕ್ಕೆ 60 ರೂ., ಇದ್ದು ಹೊಸ ದರ 80 ರೂ., ಆಗಲಿದೆ. ತುಮಕೂರು-ಮಧುಗಿರಿಗೆ 30 ರೂ., ನಿಂದ 45 ರೂ., ತುಮಕೂರು-ಕುಣಿಗಲ್‌ಗೆ 25 ರೂ., ನಿಂದ 37 ರೂ., ಹೆಬ್ಬೂರಿಗೆ 15 ರೂ., ನಿಂದ 22 ರೂ.,ಗೆ ಕೊರಟಗೆರೆ 15 ರೂ., ನಿಂದ 22 ರೂ., ಹೆಚ್ಚಳ ಮಾಡಲಾಗಿದೆ. ತುಮಕೂರು-ಗೌರಿಬಿದನೂರು ನಡುವೆ 40 ರೂ., ನಿಂದ 50 ರೂ., ಹೆಚ್ಚಳ ಮಾಡಲಾಗಿದೆ. ಕರೊನಾ ಭೀತಿಯಿಂದ ಬಸ್ ಹತ್ತಲು ಜನ ಹಿಂಜರಿಯುತ್ತಿದ್ದು ಮಧುಗಿರಿಗೆ 45 ರೂ., ನಿಗದಿ ಮಾಡಿದ್ದರೂ 40 ರೂ., ಅನ್ನೇ ಪ್ರಯಾಣಿಕರಿಂದ ಪಡೆಯಲಾಗುತ್ತಿದೆ. ಕುಣಿಗಲ್ 37 ರೂ., ಬದಲು 33 ರೂ., ಅನ್ನು ಸದ್ಯ ದರ ನಿಗದಿಗೊಳಿಸಲಾಗಿದೆ. ಒಂದೆಡೆ ಡೀಸೆಲ್ ದರ ಹೆಚ್ಚಳ, ಇನ್ನೊಂದೆಡೆ ಕರೊನಾ ಭೀತಿಯಿಂದ ಸಾರ್ವಜನಿಕ, ಖಾಸಗಿ ವಾಹನಗಳತ್ತ ಜನ ಮುಖ ಮಾಡದೇ ಇರುವುದರಿಂದ ಖಾಸಗಿ ಬಸ್ ಮಾಲೀಕರು ನಷ್ಟ ಅನುಭವಿಸುವಂತಾಗಿದೆ.
ಪ್ರತೀ ತಾಲೂಕಿಗೆ ಥರ್ಮಲ್ ಸ್ಕಾೃನಿಂಗ್ !: ಪ್ರತೀ ಪ್ರಯಾಣಿಕರ ಥರ್ಮಲ್ ಸ್ಕಾೃನಿಂಗ್, ಸ್ಯಾನಿಟೈಸರ್ ಹಾಕಬೇಕು. ಇದರ ಜತೆಗೆ ಪ್ರತೀ ಟ್ರಿಪ್ ಬಳಿಕ ಬಸ್ ಸ್ಯಾನಿಟೈಸೇಷನ್ ಮಾಡಬೇಕಿದೆ. ನಷ್ಟದ ನಡುವೆ ಈ ಹೊರೆಯನ್ನು ಸಹ ಖಾಸಗಿ ಬಸ್ ಮಾಲೀಕರು ಹೊರಬೇಕಿದೆ. ಜಿಲ್ಲೆಯಲ್ಲಿ 200 ಬಸ್‌ಗಳಿದ್ದು ಸದ್ಯಕ್ಕೆ ಕೇವಲ 15 ಬಸ್ ಮಾತ್ರ ಸಂಚಾರ ಆರಂಭಿಸಿವೆ. ಪ್ರತೀ ತಾಲೂಕಿಗೊಂದು ಥರ್ಮಲ್‌ಸ್ಕಾೃನರ್ ಅನ್ನು ಖಾಸಗಿ ಬಸ್ ಮಾಲೀಕರ ಸಂಘದ ವತಿಯಿಂದ ನೀಡಲು ಸಿದ್ಧತೆ ನಡೆಸಲಾಗಿದೆ.
ಡಿಸೇಲ್ ದರ ಹೆಚ್ಚಳ ಒಂದೆಡೆಯಾದರೆ, ಕರೊನಾ ಭೀತಿಯಿಂದ ಜನರು ಪಬ್ಲಿಕ್, ಖಾಸಗಿ ವಾಹನಗಳನ್ನು ಬಳಸುತ್ತಿಲ್ಲ. ಸ್ವಂತ ವಾಹನಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಪ್ರಯಾಣಿಕರಿಲ್ಲದೆ ಖಾಲಿ ಓಡಿಸಬೇಕಿದೆ. ಇದರ ಜತೆಗೆ ಕೆಎಸ್‌ಆರ್‌ಟಿಸಿ ದರ ಪೈಪೋಟಿ ಸಹ ಇದೆ. ಒಟ್ಟಿನಲ್ಲಿ ನಮಗೆ ಉಳಿಗಾಲವೇ ಇಲ್ಲ. ಬಿ.ಎಸ್. ಬಲಶಾಂಸಿಂಗ್ ಅಧ್ಯಕ್ಷ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ