

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನನಾಡಿಯಾಗಿದ್ದ ಖಾಸಗಿ ಸಾರಿಗೆ ಉದ್ಯಮ ಕರೊನಾ ಲಾಕ್‌ಡೌನ್ ಬಳಿಕ ಬಹುದೊಡ್ಡ ಪೆಟ್ಟು ತಿಂದಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಜನಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದ್ದರೂ ಖಾಸಗಿ ಬಸ್ ಮಾಲೀಕರು ನಷ್ಟದ ಹೊಡೆತದಿಂದ ಹೊರಬರುವಂತೆ ಕಾಣುತ್ತಿಲ್ಲ.
ಸರ್ಕಾರ ಯಾವುದೇ ತೆರಿಗೆ ವಿನಾಯಿತಿ ನೀಡದಿರುವುದು ಒಂದೆಡೆಯಾದರೆ ಕರೊನಾ ಪೂರ್ವದಲ್ಲಿದ್ದ ಡೀಸೆಲ್ ಬೆಲೆ ಈಗ ಐದು ತಿಂಗಳಲ್ಲಿ ಪ್ರತಿ ಲೀಟರ್‌ಗೆ 12 ರೂ.ನಷ್ಟು ಏರಿರುವುದು ಬಸ್ ಮಾಲೀಕರಿಗೆ ದೊಡ್ಡ ಶಾಕ್ ಕೊಟ್ಟಿದೆ.
ಲಾಕ್‌ಡೌನ್ ಕಾರಣದಿಂದಾಗಿ ಉಭಯ ಜಿಲ್ಲೆಗಳಲ್ಲಿ ಮಾರ್ಚ್ ಕೊನೆಯ ವಾರದಿಂದ ಎಲ್ಲ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು. ಲಾಕ್‌ಡೌನ್ ಸಡಿಲಗೊಂಡ ಬಳಿಕ ಜೂನ್ 1ರಿಂದ ಹಂತ ಹಂತವಾಗಿ ಬಸ್ ಕಾರ್ಯಾಚರಣೆ ಮಾಡಲು ಮಾಲೀಕರು ತೀರ್ಮಾನಿಸಿದ್ದರು. ಪ್ರಸ್ತುತ ಹಿಂದಿಗಿಂತ ಸ್ಥಿತಿ ತುಸು ಉತ್ತಮವಿದ್ದರೂ ಅದೆಲ್ಲವೂ ಡೀಸೆಲ್ ದರ ಏರಿಕೆಯಿಂದಾಗಿ ಗಣನೆಗೇ ಬರುತ್ತಿಲ್ಲ ಎನ್ನುವುದು ಮಾಲೀಕರ ಅಳಲು.
ಮಂಗಳೂರು- ಉಡುಪಿ -ಕುಂದಾಪುರ ರೂಟ್‌ನಲ್ಲೀಗ 70 ಎಕ್ಸ್‌ಪ್ರೆಸ್‌ಗಳಷ್ಟೇ ಓಡಾಡುತ್ತಿವೆ. ಹೆಚ್ಚಿನ ಬಸ್‌ಗಳಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಪ್ರಯಾಣಿಕರು ತುಂಬಿರುತ್ತಾರೆ. ಉಳಿದ ಸಮಯದಲ್ಲಿ ಬಸ್‌ಗಳಲ್ಲಿ ಅಷ್ಟೇನೂ ಜನರಿಲ್ಲ. ಇದು ಟ್ರಿಪ್ ನಿರ್ವಹಣೆಗೆ ಸಾಲುತ್ತಿಲ್ಲ. ಒಟ್ಟಾರೆ ಇಡೀ ದಿನದ ಸಂಪಾದನೆಯಲ್ಲಿ ದಿನದ ಖರ್ಚು ಹೊಂದಿಸುವುದು ಕಷ್ಟ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.
ಲಾಕ್‌ಡೌನ್ ಬಳಿಕ ಬಸ್ ಮಾಲೀಕರು ಪರ್ಮಿಟ್ ಸರೆಂಡರ್ ಮಾಡಿದ್ದು, ರಸ್ತೆಗಿಳಿಸಲು ಸಾಧ್ಯವಾಗದವರು ಇನ್ನೂ ಪಡೆದುಕೊಂಡಿಲ್ಲ. ಈ ಪರಿಸ್ಥಿತಿಯಲ್ಲಿ ಪಡೆದುಕೊಂಡಾದರೂ ಏನು ಮಾಡುವುದು ಎನ್ನುವುದು ಮಾಲೀಕರ ಪ್ರಶ್ನೆ.
ನಗರ ಸೇವೆಯೇ ವಾಸಿ: ಎಕ್ಸ್‌ಪ್ರೆಸ್/ಸರ್ವೀಸ್ ಬಸ್‌ಗಳ ಪೈಕಿ ಶೇ.30 ಮಾತ್ರ ರಸ್ತೆಗಳಿದಿದ್ದು, ಶೇ.70ರಷ್ಟು ಬಸ್‌ಗಳು ನಿಂತಲ್ಲೇ ಇವೆ. ಇವುಗಳಿಗೆ ಹೋಲಿಸಿದರೆ ಸಿಟಿ ಬಸ್‌ಗಳೇ ರಸ್ತೆಗಿಳಿದಿರುವುದು ಹೆಚ್ಚು. ಮಂಗಳೂರಿನ ಒಟ್ಟು 325 ಸಿಟಿ ಬಸ್‌ಗಳಲ್ಲಿ 275ರಷ್ಟು ರಸ್ತೆಗೆ ಇಳಿದಿದ್ದು, ಇನ್ನು 50ರಷ್ಟು ಮಾತ್ರವೇ ಬಾಕಿ ಇದೆ. ಉಡುಪಿಯ 85 ಸಿಟಿ ಬಸ್‌ಗಳ ಪೈಕಿ 35 ಬಸ್‌ಗಳು ರಸ್ತೆಗಿಳಿದಿಲ್ಲ.
ಮಂಗಳೂರು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ಪ್ರಕಾರ, ಅಕ್ಟೋಬರ್ ಮೊದಲ ವಾರದಲ್ಲಿ ಇನ್ನೊಂದಷ್ಟು ಬಸ್ ಸೇವೆ ಆರಂಭಿಸಬಹುದು. ಕೆಲವೊಂದು ರೂಟ್‌ಗಳಲ್ಲಿ ಬಸ್ ಕಡಿಮೆ ಇರುವ ಕಾರಣಕ್ಕೆ ಜನ ಬಸ್‌ಗೆ ಬರುತ್ತಿರಲಿಲ್ಲ. ಆದರೆ ಈಗ ಟ್ರಿಪ್ ಸಂಖ್ಯೆ ಹೆಚ್ಚಿಸಿದ್ದರಿಂದ ಜನರೂ ಆಟೋ, ದ್ವಿಚಕ್ರ ವಾಹನದಲ್ಲಿ ಹೋಗುವ ಬದಲು ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಬಸ್‌ಗಳನ್ನು ರಸ್ತೆಗಿಳಿಸುವುದು ಆರ್ಥಿಕ ದೃಷ್ಟಿಯಿಂದ ಕಷ್ಟ. ಆದರೆ ನಿಂತಲ್ಲೇ ನಿಲ್ಲಿಸಿದರೂ ತುಕ್ಕು ಹಿಡಿದು ಹಾಳಾಗುತ್ತವೆ. ನಿರ್ವಾಹವಿಲ್ಲದೆ ಮಾಲೀಕರು ಮುಂದಿನ ದಿನಗಳ ಮೇಲೆ ಭರವಸೆ ಇಟ್ಟು ಬಸ್‌ಗಳ ಓಡಾಟ ಆರಂಭಿಸಿದ್ದಾರೆ.
ಬಸ್ ಇರುವುದು ರಸ್ತೆಗಿಳಿದದ್ದು
ಎಕ್ಸ್‌ಪ್ರೆಸ್ 700 210
ಸರ್ವೀಸ್ 1,100 330
ಸಿಟಿ -ಮಂಗಳೂರು 325 275
ಸಿಟಿ -ಉಡುಪಿ 85 50
ಸರ್ಕಾರವೂ ಅಸಹಾಯಕ?: ರಾಜ್ಯ ಸಾರಿಗೆ ಸಚಿವರನ್ನು ಬಸ್ ಮಾಲೀಕರ ಸಂಘದವರು ಭೇಟಿಯಾಗಿ ತೆರಿಗೆ ವಿನಾಯಿತಿ ನೀಡುವಂತೆ ಕೋರಿದ್ದಾರೆ. ಆಟೋ ಚಾಲಕರಿಗೆ ನೀಡಿರುವಂತೆ ಖಾಸಗಿ ಬಸ್ ಸಿಬ್ಬಂದಿಗೂ ನೆರವಾಗಲು ಮನವಿ ಮಾಡಿದ್ದಾರೆ. ಆದರೆ ಸರ್ಕಾರವೇ ಸಂಕಷ್ಟದಲ್ಲಿದೆ; ಕೆಎಸ್ಸಾರ್ಟಿಸಿಯನ್ನೇ ಲೀಸ್‌ಗೆ ಒಪ್ಪಿಸುವ ಬಗ್ಗೆ ಯೋಜನೆ ಇರುವುದಾಗಿ ಸಚಿವರು ಹೇಳಿಕೊಂಡಿದ್ದಾರೆ. ಸರ್ಕಾರಕ್ಕೆ ನಮ್ಮ ಸಮಸ್ಯೆ ಗೊತ್ತಿದೆ. ಆದರೆ ಅವರು ಅಸಹಾಯಕರಾಗಿದ್ದಾರೆ ಎನ್ನುತ್ತಾರೆ ಬಸ್ ಮಾಲೀಕರು. ಅನೇಕ ಬಸ್ ಮಾಲೀಕರು ಸಾಲ ಮಾಡಿ ಬಸ್ ಖರೀದಿಸಿದವರಿದ್ದಾರೆ, ಅವರಿಗೆ ಇಎಂಐ ವಿನಾಯಿತಿ ಡಿಸೆಂಬರ್‌ವರೆಗೂ ವಿಸ್ತರಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಕೂಡ ಈ ಕುರಿತು ವಿನಂತಿಸಿದ್ದಾರೆ.
ಸಾಲ ಪಾವತಿ ಸಂಕಷ್ಟ: ಕರಾವಳಿಯಲ್ಲಿ 1,800ಕ್ಕೂ ಮಿಕ್ಕಿ ಖಾಸಗಿ ಮತ್ತು ಸಿಟಿ ಬಸ್‌ಗಳಿವೆ. ಸಾಮಾನ್ಯವಾಗಿ ಒಂದು ಬಸ್ ಖರೀದಿಗೆ ಸುಮಾರು 30 ಲಕ್ಷ ರೂ. ಬಂಡವಾಳ ಬೇಕು. ಬಹುತೇಕ ಮಾಲೀಕರು ಬ್ಯಾಂಕ್ ಸಾಲದ ಮುಖೇನವೇ ಖರೀದಿಸಿರುತ್ತಾರೆ. ತಿಂಗಳಿಗೆ ಸುಮಾರು 50 ಸಾವಿರ ರೂ. ಇಎಂಐ ಪಾವತಿಗೆ ಬರುತ್ತದೆ. ಕೋವಿಡ್‌ಗೆ ಮೊದಲು ಪ್ರತಿದಿನ ಸರಾಸರಿ 10ರಿಂದ 11 ಸಾವಿರ ರೂ. ಟಿಕೆಟ್ ಕಲೆಕ್ಷನ್ ಆಗುತ್ತಿತ್ತು, ಈಗ ಅದು ಅರ್ಧಕ್ಕರ್ಧ ಇಳಿದಿದೆ. ಇದರಿಂದ ಸಾಲದ ಕಂತು ಪಾವತಿಸುವುದೂ ಕಷ್ಟವಾಗಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಖಾಸಗಿ ರಸ್ತೆ ತೆರಿಗೆ ಮನ್ನಾ ಮಾಡುವಂತೆ ಖಾಸಗಿ ಬಸ್ ಮಾಲೀಕರು ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಅದಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಒಂದು ವರ್ಷದವರೆಗೆ ರಸ್ತೆ ತೆರಿಗೆ ಮನ್ನಾ ಮಾಡುವ ಕುರಿತು ಕ್ಯಾಬಿನೆಟ್ ಸಭೆಯಲ್ಲಿ ನಿರ್ಧರಿಸಿತ್ತು. ಇದನ್ನೇ ನಮ್ಮಲ್ಲೂ ಅನುಷ್ಠಾನ ಮಾಡಬೇಕು ಎಂದು ಬಸ್ ಮಾಲೀಕರು ಒತ್ತಾಯಿಸುತ್ತಾರೆ.
ನಾವು ಕಷ್ಟಪಟ್ಟು ಬಸ್ ನಡೆಸುತ್ತಿದ್ದೇವೆ. ಕೆಲದಿನಗಳಿಂದ ತಲಪಾಡಿಗೆ ಬಸ್ ಓಡಿಸುತ್ತಿದ್ದೆವು, ಆದರೆ ಕೆಎಸ್ಸಾರ್ಟಿಸಿಯವರು ತಮ್ಮ ಕಾಸರಗೋಡು ಹೋಗುವ ಬಸ್‌ಗಳನ್ನು ತಲಪಾಡಿವರೆಗೆ ಚಲಾಯಿಸುವ ಮೂಲಕ ನಮ್ಮ ಹೊಟ್ಟೆಗೆ ಹೊಡೆಯುತ್ತಿದ್ದಾರೆ.
- ದಿಲ್‌ರಾಜ್ ಆಳ್ವ, ಅಧ್ಯಕ್ಷ, ಸಿಟಿ ಬಸ್ ಮಾಲೀಕರ ಸಂಘ, ಮಂಗಳೂರು
ಶೇ.30ರಷ್ಟು ಬಸ್‌ಗಳು ಮಾತ್ರ ಓಡಾಟ ನಡೆಸುತ್ತಿದ್ದರೂ ಪ್ರಯಾಣಿಕರಿಲ್ಲ. ಕರೊನಾ ಪಾಸಿಟಿವ್ ಸಂಖ್ಯೆ ಕಡಿಮೆಯಾದರೆ ಹೆಚ್ಚಿನ ಜನ ಆಗಮಿಸಬಹುದು. ರೈಲು ಸೇವೆ, ಶಾಲಾ ಕಾಲೇಜು, ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದರೆ ಸಾರಿಗೆ ಉದ್ಯಮ ಚೇತರಿಸಿಕೊಳ್ಳಬಹುದು.
- ಸದಾನಂದ ಛಾತ್ರ, ಉಪಾಧ್ಯಕ್ಷ, ಕೆನರಾ ಬಸ್ ಮಾಲೀಕರ ಸಂಘ
ದೊಡ್ಡ ಬಸ್‌ಗಳ ಬದಲಿಗೆ ಮಿನಿಬಸ್‌ಗಳನ್ನು ರಸ್ತೆಗಿಳಿಸಿದರೂ ಆಯಾ ದಿನದ ಖರ್ಚುವೆಚ್ಚಗಳು ಬರುತ್ತಿಲ್ಲ. ಎಲ್ಲ ಬಸ್‌ಗಳು ನಷ್ಟದಲ್ಲಿ ಓಡಾಟ ನಡೆಸುತ್ತಿವೆ. ಅ.1ರಿಂದ ಕೆಲವರು ಸಂಚಾರ ಸ್ಥಗಿತಗೊಳಿಸಲು ಚಿಂತನೆ ನಡೆಸಿದ್ದಾರೆ. ಸಂಕಷ್ಟದಲ್ಲಿರುವ ಸಾರಿಗೆ ಉದ್ಯಮದ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಕನಿಷ್ಠ 3 ತಿಂಗಳ ತೆರಿಗೆ ವಿನಾಯಿತಿ ನೀಡಬೇಕು.
- ಕುಯಿಲಾಡಿ ಸುರೇಶ್ ನಾಯಕ್, ಅಧ್ಯಕ್ಷ, ಸಿಟಿ ಬಸ್ ಮಾಲಕರ ಸಂಘ, ಉಡುಪಿ