ಖಾಸಗಿ ಬಸ್​ ಪ್ರಯಾಣವೂ ಆಗಲಿದೆ ದುಬಾರಿ...!!

Bus Lead
Published on

ಶ್ರೀಘ್ರದಲ್ಲೇ ಶೇ.15 ರೂ. ದರ ಏರಿಕೆಗೆ ನಿರ್ಧಾರ

ಸರ್ಕಾರಕ್ಕೆ ಬಸ್​ ಮಾಲೀಕರ ಸಂಘ ಕೋರಿಕೆ

ಪ್ರಶಾಂತ ಭಾಗ್ವತ, ಉಡುಪಿ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕನವರಿಕೆಯಲ್ಲಿರುವ ಜನರಿಗೆ ಇದೀಗ ಖಾಸಗಿ ಬಸ್​ನವರೂ ಸಹ ಶಾಕ್​ ನೀಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಸಾರಿಗೆ ಪ್ರಯಾಣ ದರ ಶೇ.15 ಏರಿಕೆ ಮಾಡಿದ್ದು, ಅದರ ಬೆನ್ನಲ್ಲೇ ಖಾಸಗಿ ಬಸ್​ನವರೂ ಟಿಕೆಟ್​ ದರ ಏರಿಕೆಗೆ ಮುಂದಾಗಿದ್ದಾರೆ.

ಕರ್ನಾಟಕ ರಾಜ್ಯ ಖಾಸಗಿ ಬಸ್​ ಮಾಲೀಕರ ಸಂಘಗಳ ಒಕ್ಕೂಟವು ಖಾಸಗಿ ಬಸ್​ಗಳಲ್ಲೂ ಶೇ.15 ದರ ಏರಿಕೆಗೆ ನಿರ್ಧರಿಸಿದ್ದು, ಅನುಮತಿ ಕೋರಿ ರಾಜ್ಯ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.

Bus-1
ಉಡುಪಿಯಲ್ಲಿರುವ ಖಾಸಗಿ ಬಸ್​ ನಿಲ್ದಾಣ.

ದರ ಏರಿಕೆಗೆ ಕಾರಣವೇನು?

2020ರಿಂದ ಪ್ರಯಾಣ ದರ ಏರಿಸಿಲ್ಲ ಎನ್ನುವುದು ಖಾಸಗಿ ಬಸ್​ ಮಾಲೀಕರ ಸಂಘದ ಮೊದಲ ಸ್ಪಷ್ಟನೆ. ನಾಲ್ಕು ವರ್ಷದಿಂದ ಡೀಸೆಲ್​ ದರ ಏರಿಕೆ ಆಗುತ್ತಲೇ ಇದ್ದು, ಇತ್ತೀಚೆಗೆ ರಾಜ್ಯ ಸರ್ಕಾರ ಲೀಟರ್​ಗೆ ಮತ್ತೆ 3 ರೂ. ಏರಿಕೆ ಮಾಡಿದೆ. ಟೈರ್​ ದರ, ನಿರ್ವಹಣಾ ವೆಚ್ಚ, ಚಾಲಕ-ನಿರ್ವಾಹಕ ಹಾಗೂ ಸಿಬ್ಬಂದಿ ವೇತನವೂ ಹೆಚ್ಚಳವಾಗಿದೆ. ಸಮಯಕ್ಕೆ ಸರಿಯಾಗಿ ಸರ್ಕಾರಕ್ಕೆ ತೆರಿಗೆ ಭರಿಸಬೇಕು. ಇನ್ಶೂರೆನ್ಸ್​ ಪ್ರೀಮಿಯಂ ದರವೂ ಭಾರಿ ಏರಿಕೆ ಆಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎನ್ನುತ್ತಿದ್ದಾರೆ.

 ಖಾಸಗಿಗೆ ಫ್ಲೆಕ್ಸಿ ಫೇರ್ ತೊಡಕು

Bus-2
ರಾಜ್ಯದಲ್ಲಿ ಎಲ್ಲೆಲ್ಲಿ ಖಾಸಗಿ ಬಸ್​ ಸೇವೆ ಇದೆಯೋ ಆ ಕಡೆಗಳಲ್ಲಿ ಸರ್ಕಾರಿ ಬಸ್​ನವರು ಅನುಕೂಲಕರ ದರ (ಫ್ಲೆಕ್ಸಿ ಫೇರ್​) ಅಳವಡಿಸುತ್ತಿದ್ದಾರೆ. ಇದು ಪ್ರೈವೇಟ್​ ಬಸ್​ ಸೇವೆಗೆ ತೊಂದರೆ ಮಾಡುವ ಹುನ್ನಾರವಾಗಿದೆ. ಉಡುಪಿ-ಪಡುಕೆರೆ ಮಾರ್ಗದಲ್ಲಿ ಕೆಎಸ್​ಆರ್​ಟಿಸಿ ಬಸ್​ ಮಾತ್ರ ಇದ್ದು, ಮಲ್ಪೆ ವರೆಗೆ ಖಾಸಗಿ ಬಸ್​ ಸೇವೆ ಇದೆ. ಇಲ್ಲಿ ಖಾಸಗಿ ದರ 15 ರೂ. ಇದ್ದು, ಸರ್ಕಾರಿ ದರ 12 ರೂ.ಗೆ ಇಳಿಸಿದ್ದಾರೆ. ಜಾತ್ರೆ ಇನ್ನಿತರ ವಿಶೇಷ ಸಂದರ್ಭದಲ್ಲಿ ಮಾತ್ರ ಇರುತ್ತಿದ್ದ ಫ್ಲೆಕ್ಸಿ ಫೇರ್ ಬಸ್​ಗಳನ್ನು ಎಲ್ಲೆಡೆ ಅಳವಡಿಸಿದ್ದರಿಂದ ನಷ್ಟವಾಗುತ್ತಿದೆ ಎನ್ನುತ್ತಾರೆ ಖಾಸಗಿ ಬಸ್​ ಮಾಲೀಕರು.

ಖಾಸಗಿ ಸೇವೆ ಮುಗಿಸುವ ಹುನ್ನಾರ

Bus-3
ರಾಜ್ಯದಲ್ಲಿ ಸುಮಾರು 22 ಸಾವಿರ ಸರ್ಕಾರಿ ಬಸ್​, 6 ಸಾವಿರದಷ್ಟು ಖಾಸಗಿ ಬಸ್​ ಇವೆ. 17 ಜಿಲ್ಲೆಗಳಲ್ಲಿ ಖಾಸಗಿ ಬಸ್​ ಸೇವೆ ಇದ್ದು, ಸರ್ಕಾರಿ ಸಾರಿಗೆಗಿಂತ ಉತ್ತಮ ಸರ್ವೀಸ್​ ನೀಡುತ್ತಿದ್ದೇವೆ. ಸರ್ಕಾರಿ ಬಸ್​ಗಳು ಕೆಟ್ಟು ನಿಂತು, ಪ್ರಯಾಣಿಕರು ಪರದಾಡುತ್ತಿರುತ್ತಾರೆ. ಆದರೆ, ಖಾಸಗಿಯ ಸೇವೆಯಲ್ಲಿ ಕೂಡಲೇ ಬದಲಿ ಬಸ್​ ಒದಗಿಸಿ ಪ್ರಯಾಣಿಕರ ಹಿತ ಕಾಯುತ್ತೇವೆ. ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳಕ್ಕೂ ಮುಟ್ಟಿಸುತ್ತೇವೆ. ಆದರೂ ಖಾಸಗಿ ಬಸ್​ ಸೇವೆ ಮುಗಿಸಲು ಸರ್ಕಾರ ಹುನ್ನಾರ ನಡೆಸಿದೆ. ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕೊಟ್ಟು ಖಾಸಗಿಯವರು ನಷ್ಟ ಅನುಭವಿಸುತ್ತಿದ್ದೇವೆ. ಈ ಹಿಂದೆ ಸರ್ಕಾರ ಪ್ರಯಾಣ ದರ ಏರಿಕೆ ಮಾಡುವಾಗ ಸುತ್ತೋಲೆ ಹೊರಡಿಸುತ್ತಿತ್ತು. ಆಗ ಖಾಸಗಿಯವರಿಗೂ ದರ ಏರಿಸಲು ಅವಕಾಶವಿತ್ತು. ಆದರೆ, ಈ ಬಾರಿ ಯಾವುದೇ ಸುತ್ತೋಲೆ ಇಲ್ಲದೆ ಸರ್ಕಾರ ತಮ್ಮ ಬಸ್​ಗಳಿಗೆ ಮಾತ್ರ ಶೇ.15 ದರ ಏರಿಕೆ ಮಾಡಿಕೊಂಡು ನಮಗೆ ವಂಚಿಸಿದೆ ಎಂದು ಕರ್ನಾಟಕ ರಾಜ್ಯ ಖಾಸಗಿ ಬಸ್​ ಮಾಲೀಕರ ಸಂಘಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿದೆ.

ಖಾಸಗಿ ಮಜಲು ವಾಹನ ಬಸ್​ಗಳ ಸಮಸ್ಯೆ ನೀಗಿಸುವಂತೆ, ಎಲ್ಲೆಡೆ ಫ್ಲೆಕ್ಸಿ ಫೇರ್​ ಬಸ್​ ನೀಡದಂತೆ, ಖಾಸಗಿಯವರಿಗೂ ಟಿಕೆಟ್​ ದರ ಶೇ.15 ಏರಿಕೆಗೆ ಅವಕಾಶ ಕೊಡುವಂತೆ ಸಾರಿಗೆ ಸಚಿವರಿಗೆ ಮನವಿ ನೀಡಿದ್ದೇವೆ. ಅನ್ಯ ರಾಜ್ಯಗಳಲ್ಲಿರುವಂತೆ ಸರ್ಕಾರಿ-ಖಾಸಗಿ ಬಸ್​ಗಳ ಸಮಾನಾಂತರ ಸಂಚಾರ ಅವಕಾಶಕ್ಕೂ ಕೇಳಿದ್ದೇವೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ರಾಜ್ಯ ಸಾರಿಗೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಶ್ರೀಘ್ರದಲ್ಲೇ ಸರ್ಕಾರದ ನೋಟಿಫಿಕೇಷನ್​ ಬರಲಿದೆ. | ಸುರೇಶ್​ ನಾಯಕ್​ ಕುಯಿಲಾಡಿ. ಅಧ್ಯಕ್ಷ, ಕ.ರಾ. ಖಾಸಗಿ ವಾಹನ ಮಾಲೀಕರ ಸಂಘಗಳ ಒಕ್ಕೂಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net