ಇಂದು ಖಾಸಗಿ ಬಸ್ ಸಂಚಾರ

bus new
Published on

ಮಂಗಳೂರು: ಲಾಕ್‌ಡೌನ್ ಘೋಷಣೆಯಾದ ಎರಡೂವರೆ ತಿಂಗಳ ಬಳಿಕ ಜೂನ್ 1ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲಿವೆ.

ಪ್ರಥಮ ಹಂತದಲ್ಲಿ ಶೇ.35ರಷ್ಟು ಬಸ್‌ಗಳನ್ನು ರಸ್ತೆಗೆ ಇಳಿಸಲು ತೀರ್ಮಾನಿಸಲಾಗಿದೆ. ವಾರ ಕಾಲ ಪರಿಸ್ಥಿತಿಯನ್ನು ಅವಲೋಕಿಸಿ ಪ್ರತೀ ಮಾರ್ಗದ ಬಸ್ ಮಾಲೀಕರ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ದಿಲ್ರಾಜ್ ಆಳ್ವ 'ವಿಜಯವಾಣಿ'ಗೆ ತಿಳಿಸಿದ್ದಾರೆ.

ಸದ್ಯ ಬೆಳಗ್ಗೆ ಏಳರಿಂದ ಸಾಯಂಕಾಲ ಏಳು ಗಂಟೆ ತನಕ ಖಾಸಗಿ ಬಸ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಬದಲಾದ ಪರಿಸ್ಥಿತಿ ಅರ್ಥಮಾಡಿಕೊಂಡು ಸಾರ್ವಜನಿಕರು ಬಸ್ ಸಿಬ್ಬಂದಿ ಜತೆ ಸಹಕರಿಸಬೇಕು. ಎಲ್ಲ ಖಾಸಗಿ ಬಸ್‌ಗಳಲ್ಲಿ ಸ್ಯಾನಿಟೈಸರ್ ವ್ಯವಸ್ಥೆ ಇರುತ್ತದೆಯಾ ದರೂ, ಸಾರ್ವಜನಿಕರು ಎಲ್ಲರೂ ತಮ್ಮದೇ ಸ್ಯಾನಿಟೈಸರ್ ವ್ಯವಸ್ಥೆಯನ್ನು ಮಾಡಿಕೊಳ್ಳುವುದು ಹೆಚ್ಚು ಸುರಕ್ಷಿತ ಎಂದರು.

ಖಾಸಗಿ ಬಸ್ ಪ್ರಯಾಣ ದರ ಶೇ.15 ಏರಿಕೆ

ರಾಜ್ಯ ಸರ್ಕಾರದ ಆದೇಶದಂತೆ, ದ.ಕ.ದಲ್ಲಿಯೂ ಸರ್ವೀಸ್, ಎಕ್ಸ್‌ಪ್ರೆಸ್ ಬಸ್ ಪ್ರಯಾಣಕ್ಕೆ ಶೇ.15 ದರ ಏರಿಕೆ ಅನ್ವಯ. ಇನ್ನೊಂದೆಡೆ, ಕೆಎಸ್ಸಾರ್ಟಿಸಿ ಬಸ್ ಪ್ರಯಾಣ ದರದಲ್ಲಿ ಏರಿಕೆ ಇಲ್ಲ ಎಂದು ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗೀಯ ನಿಯಂತ್ರಣ ಅಧಿಕಾರಿ ಎಚ್.ಎಸ್.ಅರುಣ್ ತಿಳಿಸಿದ್ದಾರೆ. ಪ್ರಸ್ತುತ ಕೆಎಸ್ಸಾರ್ಟಿಸಿ ನಗರ ಸಾರಿಗೆ ಸಂಖ್ಯೆ ಹೆಚ್ಚಿಸಲಾಗಿದೆ. 12 ಮಾರ್ಗಗಳಲ್ಲಿ 15 ಬಸ್‌ಗಳು ಸಂಚರಿಸುತ್ತಿವೆ. ಶುಕ್ರವಾರದಿಂದ ಸ್ಟೇಟ್‌ಬ್ಯಾಂಕ್-ತಲಪಾಡಿ ಮಾರ್ಗದಲ್ಲಿ ಎರಡು ಬಸ್‌ಗಳು ಸಂಚರಿಸುತ್ತಿವೆ.

ಉಡುಪಿಯಲ್ಲೂ ಬಸ್ ಸೇವೆ ಶುರು

ಉಡುಪಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಎರಡು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಖಾಸಗಿ ಬಸ್ ಸಂಚಾರ ಜೂನ್ 1ರಿಂದ ಪುನಾರಂಭಗೊಳ್ಳಲಿದೆ. ಶೇ.25ರಷ್ಟು ಬಸ್‌ಗಳು ರಸ್ತೆಗೆ ಇಳಿಯಲಿದ್ದು, ಉಡುಪಿ ನಗರದ 85 ಸಿಟಿ ಬಸ್‌ಗಳ ಪೈಕಿನ 22 ಬಸ್‌ಗಳು ಪ್ರತಿ 15 ನಿಮಿಷಗಳಿಕ್ಕೊಮ್ಮೆ ಬೆಳಗ್ಗೆ 7ಗಂಟೆಯಿಂದ ಸಂಜೆ 7ಗಂಟೆಯವರೆಗೆ 19 ಮಾರ್ಗಗಳಲ್ಲಿ ಸಂಚಾರ ಆರಂಭಿಸಲಿವೆ. ಮಣಿಪಾಲ- ಉಡುಪಿ-ಮಂಗಳೂರು, ಕಾರ್ಕಳ-ಪಡುಬಿದ್ರೆ-ಮಂಗಳೂರು, ಕುಂದಾಪುರ-ಉಡುಪಿ-ಮಂಗಳೂರು, ಕುಂದಾಪುರ-ಉಡುಪಿ, ಕಾರ್ಕಳ-ಮೂಡುಬಿದರೆ-ಮಂಗಳೂರು, ಉಡುಪಿ-ಹಿರಿಯಡ್ಕ-ಕಾರ್ಕಳ ಮಾರ್ಗಗಳಲ್ಲಿ ಸರ್ವೀಸ್ ಬಸ್ ಸೇವೆಯೂ ಪ್ರಾರಂಭ ವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net