

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಖಾಸಗಿ ಬಸ್‌ವೊಂದು ಚಾಲಕನ ನಿಯಂತ್ರಣ ತಪ್ಪಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು ಬಸ್ ಮುಂಭಾಗ ಜಖಂಗೊಂಡರೂ ಯಾವುದೇ ಅನಾಹುತ ಸಂಭವಿಸದೇ ಬಸ್ಸಿನಲ್ಲಿದ್ದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ನೆರೆಯ ಆಂಧ್ರಪ್ರದೇಶದ ಹಿಂದೂಪುರದಿಂದ ಚಿಂತಾಮಣಿ ಮಾರ್ಗವಾಗಿ ಕೋಲಾರಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ತಿಮ್ಮಸಂದ್ರ ಬಳಿಯ ಇಳಿಜಾರು ಪ್ರದೇಶದಲ್ಲಿ ಬರುತ್ತಿದ್ದಾಗ ಬಸ್ ದಿಡೀರನೆ ಇಂಜಿನ್ ಸ್ಥಗಿತಗೊಂಡು ಸ್ಟೇರಿಂಗ್ ಲಾಕ್ ಆಗಿದೆ. ಇದರ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ಗುಂಡಿಗೆ ಎಳೆದುಕೊಂಡು ಹೋಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಈ ರಭಸಕ್ಕೆ ಬಸ್ಸಿನ ಮುಂಭಾಗ ಜಖಂಗೊಂಡಿದಲ್ಲದೇ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಈ ಸಮಯದಲ್ಲಿ ಮಳೆ ಬರುತ್ತಿದ್ದು ವಿದ್ಯುತ್ ಕಡಿತಗೊಂಡಿರುವ ಪರಿಣಾಮ ಭಾರೀ ಅನಾಹುತ ತಪ್ಪಿದೆ. ಕೂಡಲೇ ಸಮೀಪದಲ್ಲಿರುವ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಹೋಗಿ, ಬಸ್ಸಿನಲ್ಲಿದ್ದವರನ್ನು ಕೆಳಗೆ ಇಳಿಸಿದ್ದಾರೆ. ಬೆಸ್ಕಾಂ ಇಲಾಖೆಯವರನ್ನು ಕರೆಸಿ ಬಸ್ ಅನ್ನು ಯಾವುದೇ ಅವಘಢ ಸಂಭವಿಸದಂತೆ ವಿದ್ಯುತ್ ಕಂಬದಿಂದ ಬೇರ್ಪಡಿಸುವಲ್ಲಿ ಸಹ ಯಶಸ್ವಿಯಾಗಿದ್ದಾರೆ.