

ಶಿವಮೊಗ್ಗ: ನಗರದ ಎಲ್ಎಲ್ಆರ್ ರಸ್ತೆಯಲ್ಲಿ ಗುರುವಾರ ಬೆಳಗಿನಜಾವ ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಒಬ್ಬರು ಮೃತಪಟ್ಟು 10 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿನಗರದ ಪ್ರದೀಪ್ (50) ಮೃತಪಟ್ಟ ವ್ಯಕ್ತಿ. ಇವರು ಶಿವಮೊಗ್ಗದ ಸೌಭಾಗ್ಯ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಚಾಲಕನೊಂದಿಗೆ ಕಾರಿನಲ್ಲಿ ತೆರಳುತ್ತಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರದೀಪ್ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬಸ್ ಮತ್ತು ಕಾರಿನ ಚಾಲಕರು ಹಾಗೂ ಬಸ್‌ನಲ್ಲಿದ್ದ 8 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿತ್ತು. ತದನಂತರ ಸಾಗರಕ್ಕೆ ತೆರಳಬೇಕಾಗಿತ್ತು. ಎಲ್ಎಲ್ಆರ್ ರಸ್ತೆಯಲ್ಲಿ ಲಗ್ಗೇಜ್ ಇಳಿಸಲು ತೆರಳುತ್ತಿದ್ದ ವೇಳೆ ಟೀ.ಸೀನಪ್ಪ ಶೆಟ್ಟಿ ವೃತ್ತದ ಕಡೆಯಿಂದ ಸವಾರ್ ಲೈನ್ ರಸ್ತೆಯಲ್ಲಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
ಕಾರಿಗೆ ಡಿಕ್ಕಿಯಾದ ನಂತರ ಬಸ್ ಸಮೀಪದ ಕಟ್ಟಡಕ್ಕೂ ಡಿಕ್ಕಿ ಹೊಡೆದಿದೆ. ಬಸ್‌ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಿರಿದಾದ ರಸ್ತೆಯಲ್ಲಿ ಮಿತಿಮೀರಿದ ವೇಗ, ಅಜಾಗರೂಕ ಚಾಲನೆಯಿಂದ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ಡಿವೈಎಸ್ಪಿ ಸಂಜೀವ್ ಪಾಟೀಲ್, ಸಂಚಾರ ಠಾಣೆ ಇನ್‌ಸ್ಪೆಕ್ಟರ್ ದೇವರಾಜ್, ಪಶ್ಚಿಮ ಸಂಚಾರ ಠಾಣೆ ಪಿಎಸ್‌ಐಗಳಾದ ತಿರುಮಲೇಶ್, ಬಿ.ಎಚ್.ಭಾರತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶ್ಚಿಮ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.