

ಮೈಸೂರು: ಬಾಲಿವುಡ್ ಸಂಗೀತ ನಿರ್ದೇಶಕರಾದ ಗಾಯಕ ಪ್ರೀತಮ್ ಚಕ್ರವರ್ತಿ ಗಾನಸುಧೆಗೆ ಫಿದಾ ಆದ ನೆರೆದಿದ್ದವರು ಸಂಭ್ರಮಿಸಿದರು.
ನಗರದ ಹೊರವಲಯದ ಉತ್ತನಹಳ್ಳಿ ಬಳಿ ಆಯೋಜಿಸಿರುವ ಯುವ ದಸರಾ ವೇದಿಕೆಯಲ್ಲಿ ಗಾಯಕ ಪ್ರೀತಮ್ ಬರುತ್ತಿದ್ದಂತೆ ಯುವ ಸಮೂಹ ಶಿಳ್ಳೆ, ಚಪ್ಪಾಳೆ ಮೂಲಕ ನೆಚ್ಚಿನ ಗಾಯಕನನ್ನು ಬರಮಾಡಿಕೊಂಡರು.
ಯುವ ಸಮೂಹದ ಹರ್ಷ ನೋಡಿದ ಗಾಯಕ ಪ್ರೀತಮ್ ಹೇ ದಿಲ್ ಹೇ ಮುಸ್ಕಿಲ, ಥೂ ಮೇರಿ ಸನಮ್, ಥುಮ್ ಜೋ ಆಯೆ, ಅಭಿ ಕುಚ್ ದೇನೆ, ಹಲ್ಕಾ ಹಲ್ಕಾ ಹೇ ಸಮಾ, ಬಿನ್ ತೇರೆ... ಸೇರಿದಂತೆ ತಮ್ಮ ಹಲವು ಹಿಂದಿ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.
ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರ ಸಮ್ಮುಖದಲ್ಲಿ ಗಣೇಶ್ ನಟನೆಯ ಮುಂಗಾರು ಮಳೆ ಚಿತ್ರದ ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು ಹಾಗೂ ಸುದೀಪ್ ನಟನೆಯ ವಿಕ್ರಾಂತ ರೋಣ ಚಿತ್ರದ ಎಕ್ಕ ಸಕ್ಕ ಎಕ್ಕ ಸಕ್ಕ... ಹಾಡು ಹಾಡುತ್ತಿದ್ದಂತೆ ಇಡೀ ಪ್ರೇಕ್ಷಕರು ಎದ್ದು ಡಾನ್ಸ್ ಮಾಡಿದರು.
ಇದಕ್ಕೂ ಮುನ್ನ ಬಾಲಿವುಡ್ ಶೋರ್ ಪೊಲೀಸ್ ಗಾಯಕರ ತಂಡ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ತೌಬ ತೌಬ, ಊರ್ವಶಿ ಊರ್ವಶಿ ಹಾಗೂ ಇನ್ನಿತರ ಹಿಂದಿ ಗೀತೆಗಳನ್ನು ಹಾಡಿ ಯುವ ದಸರಾ ವೇದಿಕೆಯಲ್ಲಿ ಮೋಡಿ ಮಾಡಿದರು. ಒಂದು ತಾಸು ಬಾಲಿವುಡ್ ನ ರ‌್ಯಾಪ್ ಸಾಂಗ್ ಮೂಲಕ ರಂಜಿಸಿದರು. ತಮಿಳು, ಹಿಂದಿ ಗೀತೆಗಳನ್ನು ಹಾಡಿನಲ್ಲಿ ಮೂಡಿ ಬಂದ ಹಾಡುಗಳು ಕೇಕೆ, ಚಪ್ಪಾಳೆ ಗಿಟ್ಟಿಸಿದವು.
ಸಿಎಂ ಡಿಸಿಎಂಗೆ ಸನ್ಮಾನ:
ಯುವ ದಸರಾ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಭೈರತಿ ಸುರೇಶ್, ಕೆ.ಜೆ.ಜಾರ್ಜ್, ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ತಿನ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ.ಶಿವಕುಮಾರ್ ಸೇರಿದಂತೆ ಇತರರನ್ನು ಸಮಿತಿಯಿಂದ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಸನ್ಮಾನಿಸಿದರು.