

ಮಂಡ್ಯ: ಕಲಿಕೆಯಿಂದ ಬದಲಾವಣೆ ಸಾಕ್ಷರತಾ ಕಾರ್ಯಕ್ರಮದಡಿ ಅಕ್ಷರಾಭ್ಯಾಸ ಮಾಡಿದ್ದ ಜಿಲ್ಲಾ ಕಾರಾಗೃಹದ 40 ಕೈದಿಗಳು ನಗರದ ಕಾರಾಗೃಹ ಕೇಂದ್ರದಲ್ಲಿ ಪರೀಕ್ಷೆ ಬರೆದರು. ಈ ವೇಳೆ ಅಧಿಕಾರಿಗಳೊಂದಿಗೆ ಅಭಿಪ್ರಾಯ ಹಂಚಿಕೊಂಡ ಕೆಲ ಕೈದಿಗಳು ತಮ್ಮ ಮನದಾಳದ ಮಾತುಗಳನ್ನಾಡಿದರು.
ವಿವಿಧ ಕಾರಣಗಳಿಗಾಗಿ ಕಾರಾಗೃಹ ಸೇರಿರುವ ಅನಕ್ಷರಸ್ಥ ಕೈದಿಗಳು, ಕಾರಾಗೃಹದಲ್ಲೇ ಕಳೆದ ಒಂದು ವರ್ಷದಿಂದ ಅಕ್ಷರಾಭ್ಯಾಸ ಮಾಡಿದ್ದರು. 40 ಜನ ಕೈದಿಗಳ ಪೈಕಿ 37 ಪುರುಷರು ಹಾಗೂ ಮೂವರು ಮಹಿಳೆಯರು ಪರೀಕ್ಷೆ ಬರೆದರು. ಈ ವೇಳೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಕೈದಿಗಳಿಗೆ ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೆ, ಕೌಶಲಾಭಿವೃದ್ಧಿ ಚಟುವಟಿಕೆಗಳ ಕುರಿತು ತರಬೇತಿ ನೀಡಿ. ಈ ಮೂಲಕ ಅವರಲ್ಲಿ ಕೌಶಲವನ್ನು ಹೆಚ್ಚಿಸುವುದರ ಮೂಲಕ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಕಲ್ಪಿಸಬೇಕು. ಕಾರಾಗೃಹದಲ್ಲಿ ಮಹಿಳೆಯರಿಗೆ ಒದಗಿಸಿರುವ ಸೌಲಭ್ಯ ಹಾಗೂ ಬ್ಯಾರಕ್‌ಗಳು, ಕಾರ್ಖಾನೆ ವಿಭಾಗ, ಗ್ರಂಥಾಲಯ, ಕುಡಿಯುವ ನೀರು, ಶೌಚಗೃಹ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಗಳ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಕಾರಾಗೃಹದ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ನಿತ್ಯ 2 ಗಂಟೆ ವಿದ್ಯಾಭ್ಯಾಸ ನಡೆಸಲು ಅವಕಾಶ ಕಲ್ಪಿಸಲಾಗಿತ್ತು. ವ್ಯಾಸಂಗಕ್ಕೆ ಅನುಕೂಲ ಆಗುವಂತೆ ಕಲಿಕಾ ಸಾಮಗ್ರಿ ವಿತರಿಸಲಾಗಿದೆ. ’ಬಾಳಿಗೆ ಬೆಳಕು’ ಪುಸ್ತಕದಲ್ಲಿ ಪಠ್ಯವನ್ನು ಬೋಧಿಸಲಾಗಿದೆ. ಬರವಣಿಗೆ, ಓದು ಮತ್ತು ಸಾಮಾನ್ಯ ಲೆಕ್ಕಾಚಾರ ಹಾಗೂ ಸಾಮಾನ್ಯ ಜ್ಞಾನ ಕಲಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಅಣಬೆ ಬೇಸಾಯ, ಆಹಾರ ಸಿದ್ಧಪಡಿಸುವಿಕೆ, ಪ್ಲಬಿಂಗ್, ಮೋಟಾರು ರಿಪೇರಿ ಸೇರಿದಂತೆ ಕೈದಿಗಳ ಆಸಕ್ತಿ ಆಧರಿಸಿ ತರಬೇತಿಯನ್ನೂ ನೀಡಲಾಗುತ್ತದೆ. ನಮ್ಮ ಗ್ರಂಥಾಲಯದಲ್ಲಿ 18 ಸಾವಿರ ಪುಸ್ತಕಗಳಿವೆ. ಪ್ರತಿ ದಿನ 13 ದಿನಪತ್ರಿಕೆ, 5 ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳನ್ನು ಕೈದಿಗಳ ಅನುಕೂಲಕ್ಕಾಗಿ ತರಿಸಲಾಗುತ್ತಿದೆ. ಗ್ರಂಥಾಲಯದಲ್ಲಿ ಟೇಬಲ್, ಕುರ್ಚಿ, ್ಯಾನ್ ಸೇರಿದಂತೆ ಇತರೆ ಸವಲತ್ತುಗಳನ್ನು ಕಲ್ಪಿಸಲಾಗಿದೆ. ಸಾಕ್ಷರತಾ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ಮಂಡ್ಯ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಮಾಡಿಸಲಾಗುವುದು. ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ನವ ಸಾಕ್ಷರ ಪ್ರಮಾಣಪತ್ರ’ವನ್ನು ನೀಡಲಾಗುವುದು ಎಂದರು.
ಓದು ಏಕೆ ಬೇಕೆಂದು ಅರ್ಥೈಸಿದರು
ಕಲಿಕೆ ಆರಂಭಿಸಿದಾಗ ನನ್ನ ಮಕ್ಕಳು, ಮೊಮ್ಮಕ್ಕಳು ಕಲಿಯುವ ವಯಸ್ಸಿನಲ್ಲಿ ನಾನು ಪೆನ್ನು, ಪುಸ್ತಕ ಹಿಡಿಯಬೇಕಾ?. ಈ ವಯಸ್ಸಿನಲ್ಲಿ ನನಗೆ ಓದು ಒಲಿಯುತ್ತಾ?. ಕಲಿತು ಏನ್ಮಾಡಬೇಕಿತ್ತು ಎನ್ನುವ ಮನೋಭಾವ ಇತ್ತು. ಆದರೆ, ಶಿವಲಿಂಗಯ್ಯ ಮೇಷ್ಟ್ರು ಓದು ಏಕೆ ಬೇಕು ಎನ್ನುವುದನ್ನು ಅರ್ಥ ಮಾಡಿಸಿದರು. ನಂತರ ನನ್ನ ಕಲಿಕೆ ಆರಂಭವಾಯ್ತು. ನಾನೀಗ ನಾಲ್ಕು ಅಕ್ಷರ ಕಲ್ತೀವ್ನಿ. ಓದ್ತೀನಿ ಎಂದು ಕೈದಿಯೊಬ್ಬರು ಜಿಪಂ ಸಿಇಒ ಕೆ.ಆರ್.ನಂದಿನಿ ಅವರೊಂದಿಗೆ ಹೇಳುವ ವೇಳೆ ಅವರ ಮುಖದಲ್ಲಿ ಮಂದಹಾಸ, ಸಾರ್ಥಕ ಭಾವನೆ ಮೂಡಿತ್ತು.
ನಮಗೆ ಅಕ್ಷರ ಹೇಳ್ಕೊಟ್ಟಿರೋ ಶಿವಲಿಂಗಯ್ಯ ಮೇಷ್ಟ್ರುಗೆ ನಾವೆಲ್ಲ ಸೇರಿ ಶಿಕ್ಷಕರ ದಿನಾಚರಣೆಯಂದು ಸೆ. 5 ರಂದು ಸನ್ಮಾನಿಸಿ ಗೌರವಿಸುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕೋರಲಾಗುವುದು ಎಂದು ಕೃತಜ್ಞತಾ ಭಾವದಿಂದ ಅಲ್ಲಿದ್ದ ಕೈದಿಗಳು ಹೇಳಿದರು.
126 ಕೈದಿಗಳಿಗೆ ಅಕ್ಷರ ಕಲಿಸಿದ ಶಿವಲಿಂಗಯ್ಯ
ಶಿಕ್ಷಕ ಶಿವಲಿಂಗಯ್ಯ ಅವರ ಅವಿರತ ಪ್ರಯತ್ನದ ಲವಾಗಿ ಜಿಲ್ಲಾ ಕಾರಾಗೃಹದಲ್ಲಿ ಈವರೆವಿಗೂ ಸುಮಾರು 126 ಜನ ಕೈದಿಗಳು ಅಕ್ಷರ ಕಲಿತಿದ್ದಾರೆ. ಇಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಂದರ್ಭದಲ್ಲಿ ಹಲವು ಸಹೋದ್ಯೋಗಿಗಳು ಕೈದಿಗಳಿಗೆ ಪಾಠ ಕಲಿಸಲು ಹೋಗುತ್ತಿದ್ದಾರೆ ಎಂದು ಹೀಯಾಳಿಸಿದ್ದರು. ಆದರೆ, ಇದೆಲ್ಲವನ್ನೂ ಸಕರಾತ್ಮಕವಾಗಿ ತೆಗೆದುಕೊಂಡು ಪಾಠ ಕಲಿಸಿದ ಶಿವಲಿಂಗಯ್ಯ ಅವರಿಗೂ ಸಾರ್ಥಕ ಭಾವನೆ ಮೂಡಿದಂತಾಗಿದೆ.