ಅನಾಮಧೇಯ ಪತ್ರದ ಮೂಲದ ವಿಚ್ಛೇದಿತ ಪತ್ನಿಯ ಮಾನಹಾನಿಗೈದ ಅಪರಾಧಿಗೆ ಜೈಲು

Jail Prison Punishment
Published on

ಮಂಗಳೂರು: ವಿಚ್ಛೇದಿತ ಪತ್ನಿಯ ಮಾನಹಾನಿ ಮಾಡಿರುವ ಕುರಿತಾದ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೆಪಿಟಿಸಿಎಲ್ ನಿವೃತ್ತ ಇಂಜಿನಿಯರ್ ಕೋಚು ಶೆಟ್ಟಿಯನ್ನು ದೋಷಿ ಎಂದು ತೀರ್ಮಾನಿಸಿರುವ ಹೈಕೋರ್ಟ್ ಆತನಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ಎಲಿಂಜೆ ನಿವಾಸಿ ಕೋಚು ಶೆಟ್ಟಿ ಕೆಪಿಟಿಸಿಎಲ್‌ನಲ್ಲಿ ಮಂಗಳೂರು ಮತ್ತು ಪುತ್ತೂರಿನಲ್ಲಿ ಕರ್ತವ್ಯದಲ್ಲಿದ್ದರೆ, ವಿಚ್ಛೇದಿತ ಪತ್ನಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿದ್ದರು. ಕೋಚು ಶೆಟ್ಟಿ ವಿಚ್ಛೇದನದ ಬಳಿಕವೂ ಆಕೆಗೆ ಕಿರುಕುಳ ನೀಡುವುದನ್ನು ಮುಂದುವರಿಸಿದ್ದ. ಬೇರೆಯವರ ಹೆಸರಿನಲ್ಲಿ ಪತ್ರಗಳನ್ನು ಬರೆದು ಕತೆಕಟ್ಟಿ ಚಾರಿತ್ರೃಕ್ಕೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದ. ಬ್ಯಾಂಕ್ ವಿಳಾಸಕ್ಕೂ ತೆರೆದ ಅಂಚೆಯ ಮೂಲಕ ಪತ್ರ ರವಾನಿಸುತ್ತಿದ್ದ.

ಪತ್ರದಲ್ಲಿರುವುದು ವಿಚ್ಛೇದಿತ ಪತಿಯ ಕೈಬರಹ ಎಂದು ತಿಳಿದ ವಿಚ್ಛೇದಿತ ಪತ್ನಿ ವಕೀಲರ ಮೂಲಕ ಎಚ್ಚರಿಕೆ ನೋಟಿಸ್ ನೀಡಿದರೂ, ಪತ್ರ ಕಳುಹಿಸುವುದನ್ನು ನಿಲ್ಲಿಸಿರಲಿಲ್ಲ. ಇದರಿಂದ ನೊಂದು ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮಾನಹಾನಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಅಲ್ಲಿಯೂ ಆತ ಕೈಬರಹ ತನ್ನದಲ್ಲ ಎನ್ನುವ ಸುಳ್ಳುವಾದ ಮುಂದುವರಿಸಿದ್ದ. ಆತನ ಕೈಬರಹದ ಪತ್ರಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪರಿಶೀಲಿಸಿದ ತಜ್ಞರು ಕೋಚು ಶೆಟ್ಟಿಯದ್ದೇ ಕೈಬರಹ ಎಂದು ವರದಿ ನೀಡಿದ್ದರು. ಎಲ್ಲ ಸಾಕ್ಷಾೃಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.

ಈ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಕೇವಲ ಬೆರಳಚ್ಚು ತಜ್ಞರ ವರದಿ ಆಧಾರದಲ್ಲಿ ಶಿಕ್ಷೆ ನೀಡಿರುವುದು ತಪ್ಪು ಹಾಗೂ ಪತ್ರಗಳ ಮೂಲಕ ಮಾನಹಾನಿಯಾಗಿದೆ ಎನ್ನುವ ಬಗ್ಗೆ ಯಾವುದೇ ಪುರಾವೆ ಇಲ್ಲ ಎಂದು ವಾದಿಸಿದ್ದ. ಈ ವಾದ ತಳ್ಳಿಹಾಕಿರುವ ಹೈಕೋರ್ಟ್ ಮಹಿಳೆಯ ಮಾನ ಹಾನಿಗೊಳಿಸುವುದು ಗಂಭೀರವಾದ ಶಿಕ್ಷಾರ್ಹ ಅಪರಾಧವೆಂದು ಘೋಷಿಸಿ, ಮಂಗಳೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ತೀರ್ಪನ್ನು ಎತ್ತಿ ಹಿಡಿದಿದೆ. ಆತನ್ನು ತಕ್ಷಣವೇ ಬಂಧಿಸಿ ಜೈಲು ಶಿಕ್ಷೆಗೆ ಗುರಿ ಪಡಿಸುವಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಆದೇಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net