

ಮೈಸೂರು: ನಗರದ ಕೆ.ಆರ್. ಆಸ್ಪತ್ರೆಯಲ್ಲಿ ಕೈದಿಯೊಬ್ಬನಿಗೆ ಗುರುವಾರ ಚಿಕಿತ್ಸೆ ಕೊಡಿಸಲು ಪೊಲೀಸರು ಕರೆತಂದ ಸಂದರ್ಭ ಪೊಲೀಸರ ಕಣ್ತಪ್ಪಿಸಿ ಕೈದಿ ಪರಾರಿಯಾಗಿದ್ದಾನೆ.
ಹುಣಸೂರು ತಾಲೂಕಿನ ದಾಸನಪುರ ನಿವಾಸಿ ಜವರಯ್ಯ ಪರಾರಿಯಾದ ಕೈದಿ. ಈತ ದಾಸನಪುರ ಗ್ರಾಮದಲ್ಲಿ 2021ರಲ್ಲಿ ನಡೆದಿದ್ದ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿದ್ದು, ಜಿಲ್ಲಾ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಈತನಿಗೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಕೊಡಿಸಲು ಪೊಲೀಸ್ ಭದ್ರತೆಯೊಂದಿಗೆ ಕರೆ ತರಲಾಗಿತ್ತು.
ಅಪರಾಧಿ ಜವರಯ್ಯ ದಾಸನಪುರ ಗ್ರಾಮದ ನಿವಾಸಿ ಶಿವಣ್ಣ ಅವರ ಪುತ್ರ ಕಾರ್ತಿಕ್ (9)ನನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟು ನಂತರ ಹತ್ಯೆ ಮಾಡಿದ್ದ. ಈತನ ವಿರುದ್ಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಅಪಹರಣ, ಸುಲಿಗೆ, ಕೊಲೆ ಮತ್ತು ಸಾಕ್ಷಿ ನಾಶ ಸಂಬಂಧ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಯ ಬಳಿಕ ನ್ಯಾಯಾಲಯ ಜವರಯ್ಯಗೆ ಶಿಕ್ಷೆ ವಿಧಿಸಿತ್ತು. ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.