ಜೈಲಿನಲ್ಲಿ ಕೈದಿ ಮೇಲೆ ಹಲ್ಲೆ

IMG20241006195402.jpg
Published on

ಬೆಳಗಾವಿ: ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗುರುವಾರ ವಿಚಾರಣಾದೀನ ಕೈದಿಯೋರ್ವನ ಮೇಲೆ ಇತರ ಕೈದಿಗಳ ಗುಂಪೊಂದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರ ಮೂಲದ, ಸದ್ಯ ಬೆಳಗಾವಿ ರಾಮತೀರ್ಥ ನಗರದ ನಿವಾಸಿ ಹಿತೇಶಕುಮಾರ ಚವ್ಹಾಣ ಹಲ್ಲೆಗೊಳಗಾದವ. ಜೈಲಿನಲ್ಲಿರುವ ಇತರ ವಿಚಾರಣಾದೀನ ಕೈದಿಗಳಾದ ಬಸವರಾಜ ಹೊಳೆಪ್ಪ ದಡ್ಡಿ, ಬಸವಣ್ಣಿ ಸಿದ್ದಪ್ಪ ನಾಯ್ಕ, ಸವಿನಾ ಸಿದ್ದಪ್ಪ ದಡ್ಡಿ, ಪ್ರದಾನಿ ಶೇಖರ ವಾಘಮೋಡೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿತೇಶಕುಮಾರ ಚವ್ಹಾಣನನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಿಂಡಲಗಾ ಜೈಲಿಗೆ ರವಾನಿಸಲಾಗಿತ್ತು. ಘಟನೆಯ ಹಿನ್ನೆಲೆ: ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯ ಹೊನಗಾ ಕೈಗಾರಿಕಾ ಪ್ರದೇಶದಲ್ಲಿನ ವಿನಾಯಕ ಸ್ಟೀಲ್ ಆ್ಯಂಡ್ ರೋಲಿಂಗ್ ಫ್ಯಾಕ್ಟರಿಯ ವ್ಯವಸ್ಥಾಪಕ ಹಿತೇಶಕುಮಾರ ಚವ್ಹಾಣ ಹಾಗೂ ಅಯೂಬಖಾನ್ ಪಠಾಣ ಎಂಬವರ ನಡುವೆ ಹಣಕಾಸಿನ ವಿಚಾರಕ್ಕೆ ಸೆ.30ರಂದು ಗಲಾಟೆ ನಡೆದಿತ್ತು. ಈ ವ್ಯವಹಾರಕ್ಕೆ ಮುತ್ಯಾನಟ್ಟಿ ಗ್ರಾಮದ ಲಕ್ಷ್ಮಣ ದಡ್ಡಿ ಮಧ್ಯಸ್ಥಿಕೆ ವಹಿಸಲು ಹೋಗಿದ್ದ. ಈ ವೇಳೆ ಹಿತೇಶಕುಮಾರ ಹಾಗೂ ಲಕ್ಷ್ಮಣ ದಡ್ಡಿ ಮಧ್ಯೆ ಮಾತಿಗೆ ಮಾತು ಬೆಳೆದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಗಲಾಟೆಯಲ್ಲಿ ಲಕ್ಷ್ಮಣ ದಡ್ಡಿ ಮತ್ತು ಆತನೊಂದಿಗೆ ಬಂದಿದ್ದ ದಿಲೀಪ್ ಕಮಜಗಿ ತೀವ್ರವಾಗಿ ಗಾಯಗೊಂಡಿದ್ದರು. ಕಾಕತಿ ಪೊಲೀಸರು ಹಿತೇಶಕುಮಾರನನ್ನು ಬಂಧಿಸಿ, ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ರವಾನಿಸಿದ್ದರು. ಆದರೆ, ಬೇರೆ ಪ್ರಕರಣದಲ್ಲಿ ಬಂಧಿಯಾಗಿರುವ ಲಕ್ಷ್ಮಣ ದಡ್ಡಿ ಸಂಬಂಧಿಕರಿಗೆ ಈ ವಿಷಯ ಗೊತ್ತಾಗಿ ಹಿತೇಶಕುಮಾರನನ್ನು ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಹಿಂಡಲಗಾ ಕೇಂದ್ರ ಕಾರಾಗೃಹದ ಪ್ರಭಾರಿ ಅಧೀಕ್ಷಕ ಬಿ.ಎಂ. ಕೊಟ್ರೇಶ್ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net