

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಡಿಎಂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಜತೆಗೆ ಇತ್ತೀಚಿನ ತಾಂತ್ರಿಕ ಅಭಿವೃದ್ಧಿಯನ್ನು ಅರ್ಥಮಾಡಿಕೊಳ್ಳುವ ವೇದಿಕೆ ಕಲ್ಪಿಸಲು ಬದ್ಧವಾಗಿದೆ ಎಂದು ಎಸ್ಡಿಎಂಇ ಸೊಸೈಟಿ ಕಾರ್ಯದರ್ಶಿ ಜೀವಂಧರಕುಮಾರ ಹೇಳಿದರು.
ನಗರದ ಶ್ರೀ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಕಾಲೇಜು ಸಹಯೋಗದೊಂದಿಗೆ ಅಗಸ್ತ್ಯ ಇಂಟರ್ನ್ಯಾಷನಲ್ ಪ್ರತಿಷ್ಠಾನ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ 2 ದಿನಗಳ ರಾಜ್ಯ ಮಟ್ಟದ ಇಂಜಿನಿಯರಿಂಗ್ ಪ್ರೊಜೆಕ್ಟ್ ಪ್ರದರ್ಶನ ಮತ್ತು ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಈಶ್ವರ ನಾಯಕ ಮಾತನಾಡಿ, ಯುವ ಮನಸ್ಸುಗಳಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಮನಸ್ಥಿತಿ ಬೆಳೆಸುವ ಉದಾತ್ತ ಉದ್ದೇಶಕ್ಕಾಗಿ ಕಾಲೇಜು ಪ್ರಯತ್ನ ಶ್ಲಾಘನೀಯ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ರಮೇಶ ಚಕ್ರಸಾಲಿ ಮಾತನಾಡಿದರು. ಕಾಲೇಜಿನ ವಿದ್ಯುತ್ ಇಂಜಿನಿಯರಿಂಗ್ ವಿಭಾಗದಲ್ಲಿ 35ಕ್ಕೂ ಹೆಚ್ಚು ಆಯ್ದ ಇಂಜಿನಿಯರಿಂಗ್ ಪ್ರೊಜೆಕ್ಟ್ಗಳನ್ನು ಪ್ರದರ್ಶಿಸಲಾಯಿತು. ಮೂಡಬಿದ್ರೆಯ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿಗಳು ಪ್ರಥಮ, ಉಡುಪಿಯ ಮಧ್ವ ವಾದಿರಾಜ ಕಾಲೇಜು ದ್ವೀತಿಯ ಹಾಗೂ ನಿಡಸೋಸಿಯ ಹೀರಾಶುಗರ್ ಇಂಜಿನಿಯರಿಂಗ್ ಕಾಲೇಜು ತೃತೀಯ ಸ್ಥಾನ ಪಡೆದವು.
ಸಮಾರೋಪ ಸಮಾರಂಭದಲ್ಲಿ ಡಾ. ರಮೇಶ ಚಕ್ರಸಾಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಡಾ. ಜಿ.ಡಿ. ಕಮಲಾಪುರ, ಡಾ. ಮಹೇಶ, ಎಸ್.ಎಸ್. ಬಾಣದ ನಿರ್ಣಾಯಕರಾಗಿ ಆಗಮಿಸಿದ್ದರು. ಭಾಸ್ಕರ್ ನಾಯ್ಡು, ಕಾಲೇಜು ಸಿಬ್ಬಂದಿ, ಇತರರು ಇದ್ದರು.
ಸಾಯಿ ಚಂದ್ರಶೇಖರ ಸ್ವಾಗತಿಸಿದರು. ಪ್ರೊ. ಶ್ರವಣ ನಾಯಕ್ ವಂದಿಸಿದರು.