ನ್ಯೂನತೆ ಸರಿಪಡಿಸಲು ಆದ್ಯತೆ

kaage
Published on

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯಾಚರಣೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಆದ್ಯತೆ ನೀಡಲಾಗುವುದು. ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ತರಲಾಗುವುದು ಎಂದು ಸಂಸ್ಥೆಯ ನೂತನ ಅಧ್ಯಕ್ಷ ಭರಮಗೌಡ (ರಾಜು) ಕಾಗೆ ಹೇಳಿದರು.

ಇಲ್ಲಿಯ ಗೋಕುಲ ರಸ್ತೆಯಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ನಷ್ಟದಲ್ಲಿರುವುದು ನನ್ನ ಗಮನಕ್ಕೆ ಇದೆ. ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಿರುವ ಶಕ್ತಿ ಯೋಜನೆಯಡಿ ಸರ್ಕಾರದಿಂದ 250 ಕೋಟಿ ರೂ. ಬಾಕಿ ಬರಬೇಕಿದೆ ಎಂದು ತಿಳಿಸಿದರು.

ಜಗಳ ಮಾಡಲು ಬರುವುದಿಲ್ಲ: ಕಾಂಗ್ರೆಸ್​ನಿಂದ ಆಯ್ಕೆಯಾದ 135 ಶಾಸಕರಲ್ಲಿ 34 ಜನ ಮಂತ್ರಿಗಳಾಗಿದ್ದಾರೆ. ಈಗ 30 ಶಾಸಕರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಎಲ್ಲರೂ ಲಾಭದಲ್ಲಿ ಇರುವ ಸಂಸ್ಥೆಯನ್ನೇ ಕೇಳಬಾರದು. ತ್ಯಾಗ ಮಾಡಬೇಕಾಗುತ್ತದೆ. ನಾನು ಐದನೇ ಬಾರಿ ಶಾಸಕ. ಆದರೂ ನಷ್ಟದಲ್ಲಿರುವ ವಾಕರಸಾ ಸಂಸ್ಥೆಯ ಅಧ್ಯಕ್ಷ ಸ್ಥಾನ ಒಪ್ಪಿಕೊಂಡಿದ್ದೇನೆ. ಜವಾಬ್ದಾರಿ ಕೊಟ್ಟಿದ್ದಾರೆ. ಸಮರ್ಥವಾಗಿ ನಿಭಾಯಿಸುತ್ತೇನೆ. ಬೇರೆ ನಿಗಮ ಕೊಡಿ ಎಂದು ಜಗಳ ಮಾಡಲು ಬರುವುದಿಲ್ಲ ಎಂದು ಹೇಳಿದರು.

ಶಾಸಕ ಎನ್.ಎಚ್. ಕೊನರಡ್ಡಿ, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್., ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net