

ಮುಧೋಳ: ಇಡಿ ಸಮಾಜಕ್ಕಾಗಿ ಸತ್ಯ ಮೂಡಿಸುವ ಮತ್ತು ವಸ್ತು ನಿಷ್ಠ ಸುದ್ದಿ ಜತೆ ಮಾನವೀಯ ಸಂಬಂಧಗಳ ಕಾರ್ಯ ಅವಶ್ಯಕವಾಗಿದೆ ಎಂದು ಸಾ.ಶಿ. ಇಲಾಖೆ ವಿಶ್ರಾಂತ ಉಪನಿರ್ದೇಶಕ ಎಂ.ಜಿ. ದಾಸರ ಹೇಳಿದರು.
ನಗರದ ಟಂಕಸಾಲಿ ಭವನದಲ್ಲಿ ಜಗನ್ನಾಥರಾವ ಟಂಕಸಾಲಿ ಪ್ರತಿಷ್ಠಾನ, ಹಿಂದಿ ಪ್ರಚಾರ ಸಂಘ ಹಾಗೂ ಸಾರ್ವಜನಿಕ ವಾಚನಾಲಯ ಟ್ರಸ್ಟ್ ಆಶ್ರಯದಲ್ಲಿ ಟಂಕಸಾಲಿರವರ 24ನೇ ಪುಣ್ಯಸ್ಮರಣೆ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಪತ್ರಕರ್ತರ ಹಾಗೂ ಹಿಂದಿ ಪ್ರಚಾರಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಧೋಳದ ಹಿರಿಯ ಪತ್ರಕರ್ತ ಜಗನ್ನಾಥರಾವ ಅವರು ತಮ್ಮ ಸುದೀರ್ಘ ಐದು ದಶಕಗಳವರೆಗೆ ಪತ್ರಕರ್ತರಾಗಿ ಅವರು ಸಲ್ಲಿಸಿದ್ದ ಸೇವೆ ಇಂದಿನ ಯುವಕರಿಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಮಾತೃ ಭಾಷೆಯಲ್ಲಿ ಪ್ರಭುತ್ವ ಹೊಂದಿದರೆ ಹಿಂದಿ, ಇಂಗ್ಲಿಷ್ ಇತರೆ ಭಾಷೆ ಸುಲಭವಾಗಿ ಅರಿಯಬಹುದು. ಮನುಷ್ಯ ಆನಂದದಿಂದರಲು ಸಂಗೀತ, ಸಾಹಿತ್ಯ, ಕಲೆ, ಕ್ರೀಡೆಗಳಲ್ಲಿ ಭಾಗವಹಿಸಬೇಕು. ಇಲ್ಲವೆ ಇವುಗಳ ಮನರಂಜನೆ ಪಡೆಯಬೇಕು ಎಂದು ಹೇಳಿದರು.
ಸನ್ಮಾನ: ಬಾಗಲಕೋಟೆಯ ಹಿರಿಯ ಪತ್ರಕರ್ತ ಈಶ್ವರ ಶೆಟ್ಟರ್, ಮುಧೋಳದ ವರದಿಗಾರ ಬಿ. ಎಚ್. ಬೀಳಗಿ, ಹಿಂದಿ ಪ್ರಚಾರಕ ಕಲಘಟಗಿಯ ಇಂಗ್ಲಿಷ್ ಶಾಲೆ ಮುಖ್ಯಶಿಕ್ಷಕ ಕೇಶವ ಡೊಂಗಿ, ಬೀಳಗಿಯ ಡಾ. ವಿದ್ಯಾ ಮಹೇಂದ್ರಕರ ಟಂಕಸಾಲಿ ಪ್ರತಿಷ್ಠಾನದ 24ನೇ ಪ್ರಶಸ್ತಿ ಪುರಸ್ಕಾರ ಪಡೆದರು.
ಅಲ್ಲದೆ, ಹಿಂದಿ ಪ್ರಚಾರಕರ ಸಂಘದಿಂದ ನಡೆದ ಹಿಂದಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಸಮರ್ಥ ದೇಶಪಾಂಡೆ, ಶಿವಾನಿ ಮಠದ ಅವರನ್ನು ಗಣ್ಯರು ಸನ್ಮಾನಿಸಿದರು.
ನ್ಯಾಯವಾದಿ ಮಿಲಿಂದ ಟಂಕಸಾಲಿ, ಪ್ರತಿಷ್ಠಾನದ ಅಧ್ಯಕ್ಷ ಆರ್. ಟಿ. ಬುದ್ನಿ, ಪ್ರಧಾನ ಕಾರ್ಯದರ್ಶಿ ಟಿ.ಕೆ. ಹಂಚಾಟೆ, ಗುರುರಾಜ ಪೋತ್ನೀಸ್, ಎಂ.ಎಚ್. ನದ್ಾ, ವಿ.ಎಸ್. ಮುನವಳ್ಳಿ, ಮಹಾದೇವಪ್ಪ ಹಡಪದ, ಉದಯ ವಾಳ್ವೇಕರ, ವಿಶ್ವನಾಥ ಮುನವಳ್ಳಿ, ವೆಂಕಟೇಶ ಗುಡೆಪ್ಪನವರ ಇತರರಿದ್ದರು.