ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆದ್ಯತೆ ಸಿಗಲಿ

ಹನೂರಿನಲ್ಲಿ ಬಿಜೆಪಿ ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಕಮಲಮ್ಮ ಸರಸ್ವತಿ, ರಾಜು, ಮೂರ್ತಿ ಇತರರು ಇದ್ದರು.
ಹನೂರಿನಲ್ಲಿ ಬಿಜೆಪಿ ಮಂಡಲಾಧ್ಯಕ್ಷ ವೃಷಭೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಕಮಲಮ್ಮ ಸರಸ್ವತಿ, ರಾಜು, ಮೂರ್ತಿ ಇತರರು ಇದ್ದರು.
Published on

ಹನೂರು: ಮಲೆ ಮಹದೇಶ್ವರಬೆಟ್ಟದಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದರ ಜತೆಗೆ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಗಮನಹರಿಸಬೇಕು ಎಂದು ಬಿಜೆಪಿ ಹನೂರು ಮಂಡಲಾಧ್ಯಕ್ಷ ಕೆ.ಪಿ ವೃಷಭೇಂದ್ರಸ್ವಾಮಿ ಒತ್ತಾಯಿಸಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಹನೂರು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ. ಇದರಿಂದ ಜನರು ಮೂಲ ಸೌಕರ್ಯದಿಂದ ವಂಚಿತರಾಗಿದ್ದು, ತೊಂದರೆ ಪಡುವಂತಾಗಿದೆ. ಇದೀಗ ಮ.ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ಸಂತಸದ ವಿಷಯ. ಆದ್ದರಿಂದ ಹನೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಗ್ರಾಪಂ ಮಟ್ಟದಲ್ಲಿ ಸರ್ಕಾರಿ ಆಸ್ಪತ್ರೆ ತೆರೆಯಬೇಕು ಎಂದರು.

ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಕರ್ಯ ಒದಗಿಸುವುದರ ಜತೆಗೆ ಕಾಡಂಚಿನ ಗ್ರಾಮಗಳಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಸ್ಥಾಪಿಸಬೇಕು. ಗುಳೆ ಹೊಗುವುದನ್ನು ತಪ್ಪಿಸುವ ಸಲುವಾಗಿ ಕೈಗಾರಿಕೆ ಸ್ಥಾಪನೆಯಾಗಬೇಕು. ಬಂಡಳ್ಳಿ, ತೆಳ್ಳನೂರು, ಒಡೆಯರಪಾಳ್ಯ ಭಾಗ ಹಾಗೂ ತಾಲೂಕಿನಲ್ಲಿ ಹದಗಟ್ಟಿರುವ ರಸ್ತೆಗಳು ಅಭಿವೃದ್ಧಿಯಾಗಬೇಕು. ರೈತರಿಗೆ ಸಮರ್ಪಕ ಮಾರುಕಟ್ಟೆ ಸೇವೆ ಒದಗಿಸಬೇಕು. ಇಂಡಿಗನತ್ತ ಪ್ರಕರಣವನ್ನು ಕೈ ಬಿಡಬೇಕು. ಜತೆಗೆ ಈಗಾಗಲೇ ಬಜೆಟ್‌ನಲ್ಲಿ ಘೋಷಿಸಿರುವ ತಾಲೂಕು ಆಸ್ಪತ್ರೆಯನ್ನು ಶೀಘ್ರ ಮೇಲ್ದರ್ಜೆಗೇರಿಸಬೇಕು, ಪ್ರಜಾಸೌಧ ನಿರ್ಮಾಣವಾಗಬೇಕು. ಈ ಬಗ್ಗೆ ಸರ್ಕಾರ ಗಮನಹರಿಸಿ ಹೆಚ್ಚಿನ ಅನುದಾನ ನೀಡಿ ಬೇಡಿಕೆಗಳನ್ನು ಈಡೇರಿಸಬೇಕು. ಈ ಬಗ್ಗೆ 6 ತಿಂಗಳ ಕಾಲಾವಕಾಶ ನೀಡಲಾಗುವುದು. ಅಷ್ಟರೊಳಗೆ ಸಮಸ್ಯೆ ಬಗೆಹರಿಯದಿದ್ದಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಸಭೆಯಲ್ಲಿ ಬಿಜೆಪಿ ಮಹಿಳಾ ಮೊರ್ಚ ಜಿಲ್ಲಾಧ್ಯಕ್ಷೆ ಮಲೆಯೂರು ಕಮಲಮ್ಮ, ಮನ್ ಕೀ ಬಾತ್ ಜಿಲ್ಲಾ ಸಂಚಾಲಕಿ ಸರಸ್ವತಿ, ಮ.ಬೆಟ್ಟ ಮಂಡಲಾಧ್ಯಕ್ಷ ಚಂಗವಾಡಿ ರಾಜು, ಪ್ರಧಾನ ಕಾರ್ಯದರ್ಶಿಗಳಾದ ಮೂರ್ತಿ, ಶಿವಕುಮಾರ್, ಮುರುಗೇಶ್, ಯುವ ಮೊರ್ಚ ಅಧ್ಯಕ್ಷ ಮಹೇಶ್, ಮುಖಂಡರಾದ ಮಲ್ಲಿಕಾರ್ಜುನಸ್ವಾಮಿ, ರವಿ, ರಾಕೇಶ್, ಕೆಂಚಪ್ಪ, ನಂಜುಂಡಸ್ವಾಮಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net