

ಶಿವಮೊಗ್ಗ: ಸಂಗ್ರಾಮದ ದಿನಗಳು ಮುಗಿದಿವೆ. ಇನ್ನು ಪರಸ್ಪರ ಟೀಕೆಗಳಲ್ಲಿ ತೊಡಗುವ ಬದಲು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಗಮನ ಹರಿಸಬೇಕು ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ಹೇಳಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೆ ಸ್ಪರ್ಧಿಸಿರುವುದು ತಮ್ಮ ಪುತ್ರ ಎಂದು ಭಾವಿಸದೇ ರಾಘವೇಂದ್ರ ಅವರನ್ನು ಅಭಿವೃದ್ಧಿ ಹರಿಕಾರ ಎಂದು ಪರಿಗಣಿಸಿ ಪ್ರಚಾರ ನಡೆಸಿದರು. ರಾಘವೇಂದ್ರ ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚುನಾವಣಾ ಸಂಗ್ರಾಮದಲ್ಲಿ ಜಿಲ್ಲಾ ಬಿಜೆಪಿ, ರಾಜ್ಯ ಬಿಜೆಪಿಯ ಹಿರಿಯ ನಾಯಕರು, ಎಲ್ಲ ಮಹಾಶಕ್ತಿ ಕೇಂದ್ರಗಳ ಪ್ರಮುಖರು, ಕಾರ್ಯಕರ್ತರು ಶ್ರಮಿಸಿದ್ದಾರೆ. ರಾಷ್ಟ್ರ ನಾಯಕರೂ ಪ್ರಚಾರದಲ್ಲಿ ಭಾಗವಹಿಸಿದ್ದರು. ಕಾನೂನು ಉಲ್ಲಂಘಿಸಿ ಚುನಾವಣೆ ನಡೆಸುವುದು ಯಾವ ರಾಜಕೀಯ ಪಕ್ಷಕ್ಕೂ ಸಾಧ್ಯವಿಲ್ಲ. ಪ್ರಚಾರ ಕಣದಲ್ಲಿ ಅನೇಕ ಆರೋಪ, ಪ್ರತ್ಯಾರೋಪಗಳು ಬಂದಿವೆ. ಇವೆಲ್ಲವೂ ಮುಗಿದ ಅಧ್ಯಾಯ ಎಂದರು.