

ಚನ್ನರಾಯಪಟ್ಟಣ: ಪ್ಲಾಸ್ಟಿಕ್‌ಮುಕ್ತ ಪರಿಸರ ನಿರ್ಮಾಣಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಮನವಿ ಮಾಡಿದರು.
ತಾಲೂಕಿನ ನಲ್ಲೂರು ನೆಲಭರ್ತಿ ಜಾಗದ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ ಸೋಮವಾರ ಸ್ವಚ್ಛ ಭಾರತ್ ಮಿಷನ್ 1.0 ಯೋಜನೆಯಡಿ ಕಸ ವಿಂಗಡಣೆಗೆ ನೂತನವಾಗಿ ಅಳವಡಿಸಿರುವ ಟ್ರಾಮಲ್, ಬೇಲಿಂಗ್ ಹಾಗೂ ಶೆಡ್ಡರ್ ಮಷಿನ್‌ಗಳ ಕಾರ್ಯಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೊದಲು ನಾವು ನಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಪಟ್ಟಣದಲ್ಲಿ ಘನ ತ್ಯಾಜ್ಯ ಹೆಚ್ಚಾಗಿ ಉತ್ಪಾದನೆಯಾಗುತ್ತಿದೆ. ತ್ಯಾಜ್ಯವನ್ನು ವಿಂಗಡಿಸಿ ಆರೋಗ್ಯಕರ ಮತ್ತು ಸ್ವಚ್ಛ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರತಿ ವಾರ್ಡ್‌ನಿಂದ ಒಣ, ಹಸಿ ಕಸವನ್ನು ಸಂಗ್ರಹಿಸಿ, ವ್ಯವಸ್ಥಿತ ಮತ್ತು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ನಲ್ಲೂರು ಗ್ರಾಮದಲ್ಲಿ 21.4 ಎಕರೆ ಜಾಗದಲ್ಲಿ ಸುಸಜ್ಜಿತ ತ್ಯಾಜ್ಯ ವಿಲೇವಾರಿ ಘಟಕವನ್ನು ನಿರ್ಮಾಣ ಮಾಡಲಾಗಿದೆ. ವಿವಿಧ ಹಂತದಲ್ಲಿ ಕಸವನ್ನು ವಿಂಗಡಿಸಲಾಗುತ್ತದೆ ಎಂದರರು.
ಪಟ್ಟಣವನ್ನು ತ್ಯಾಜ್ಯ ಮುಕ್ತವಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡರೂ ವಿಶ್ವವಿಖ್ಯಾತ ಪ್ರವಾಸಿ ತಾಣ ಶ್ರವಣಬೆಳಗೊಳ ರಸ್ತೆ ಹಾಗೂ ಹೇಮಾವತಿ ನಾಲೆಯ ರಸ್ತೆಯಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿರುವುದು ಕಂಡುಬಂದಿದೆ. ಸಾರ್ವಜನಿಕರು ಕಸ ಹಾಕುವವರ ಮಾಹಿತಿ ನೀಡಿದರೆ ಪುರಸಭೆಯಿಂದ ಬಹುಮಾನ ನೀಡಲಾಗದು ಹಾಗೂ ಕಸ ಹಾಕುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಹಳ್ಳಿ ಮಂಜುನಾಥ್, ಪುರಸಭಾ ಸದಸ್ಯರಾದ ಲಕ್ಷ್ಮಮ್ಮ, ಕವಿತಾ ರಾಜು, ಸುಜಾತಾ, ಬನಶಂಕರಿ ರಘು, ರಾಣಿಕೃಷ್ಣ, ಸುರೇಶ್, ನವೀನ್‌ಕುಮಾರ್, ಗಣೇಶ್, ಧರಣೇಶ್, ಪುರಸಭಾ ಮುಖ್ಯ ಅಧಿಕಾರಿ ಕೆ.ಎನ್.ಹೇಮಂತ್‌ಕುಮಾರ್, ಆರೋಗ್ಯ ನಿರೀಕ್ಷಕರಾದ ರಾಜು, ಮಂಜುನಾಥ್, ಪುರಸಭಾ ಸಿಬ್ಬಂದಿ, ಪೌರಕಾರ್ಮಿಕರು ಇದ್ದರು.