

ಶೃಂಗೇರಿ: ಕಳೆದ ಐದು ವರ್ಷದಿಂದ ನಿಷ್ಕ್ರಿಯಯವಾಗಿದ್ದ ಅನಿವಾಸಿ ಭಾರತೀಯ ಸಚಿವಾಲಯವನ್ನು ಮತ್ತೆ ಪುನಃಶ್ಚೇತನಗೊಳಿಸಲಾಗುತ್ತಿದ್ದು, ಬಜೆಟ್‌ನಲ್ಲಿ 100 ಕೋಟಿ ರೂ. ನೀಡುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದು ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದೇಶದಲ್ಲಿರುವ ಕನ್ನಡಗರ ಹಿತರಕ್ಷಣೆಗಾಗಿ ಸಚಿವಾಲಯ ಕೆಲಸ ಮಾಡುತ್ತಿದ್ದು, ಸಮರ್ಪಕ ದಾಖಲೆ ಹೊಂದಿರದ ಮತ್ತು ಉದ್ಯೋಗಕ್ಕಾಗಿ ತೆರಳಿ ಅನಾಮಿಕ ಕಂಪನಿಯಿಂದ ಮೋಸ ಹೋದ ಜನರಿಗೆ ರಕ್ಷಣೆ ನೀಡುವುದೂ ಸೇರಿದಂತೆ ಕನ್ನಡಿಗರ ಹಿತರಕ್ಷಣೆ ಮಾಡುವುದು ಸಮಿತಿಯ ಆದ್ಯತೆಯಾಗಿದೆ ಎಂದರು.
ಹೆಚ್ಚಿನ ಸಂಬಳದ ಆಸೆ ತೋರಿಸಿ ಕಾಂಬೋಡಿಯಾ, ವಿಯಟ್ನಾಂ ದೇಶಕ್ಕೆ ಕರೆದೊಯ್ಯುವ ಮಧ್ಯವರ್ತಿಗಳು ಹಾಗೂ ಮೋಸ ಮಾಡುತ್ತಿರುವ ಕಂಪನಿಗಳ ಬಗ್ಗೆ ತೀವ್ರ ನಿಗಾ ಅಗತ್ಯ. ಇಂತಹ ಕಂಪನಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಗಲ್ಫ್ ರಾಷ್ಟ್ರದಿಂದ ಕೆಲಸ ಕಳೆದುಕೊಂಡು ಬಂದವರಿಗೆ ಉದ್ಯೋಗ ಭದ್ರತೆ ಇಲ್ಲವಾಗಿದೆ. ಅಂಥವರಿಗೆ ಕೌಶಲ ತರಬೇತಿ ನೀಡಲಾಗುತ್ತದೆ. ಪ್ರಪಂಚದಾದ್ಯಂತ ಇರುವ ಕನ್ನಡಿಗರನ್ನು ಒಟ್ಟುಗೂಡಿಸಿ ವರ್ಷದಲ್ಲಿ ಒಂದು ಬಾರಿ ಕನ್ನಡಿಗರ ದಿನಾಚರಣೆ ಮಾಡುವ ಉದ್ದೇಶ ಹೊಂದಲಾಗಿದೆ. ಇದರಿಂದ ಪ್ರವಾಸೋದ್ಯಮ, ವ್ಯಾಪಾರ, ಉದ್ಯೋಗ ಮುಂತಾದ ಬೆಳವಣಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ಬೇಗಾನೆ ಗ್ರಾಮಸ್ಥರಾದ ಪ್ರಸನ್ನ, ನಾಗರಾಜ್, ಕಿಶೋರ್, ಸುರೇಶ್, ಬಿ.ಆರ್.ನವೀನ್, ರಮೇಶ್ ಬೇಗಾನೆ ಗ್ರಾಮದ ಹಿರಿಯಮ್ಮ ದೇವಸ್ಥಾನಕ್ಕೆ ವಿಶೇಷ ಅನುದಾನದಡಿ ಡಾಂಬರ್ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಸಲ್ಲಿಸಿದರು.