ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆದ್ಯತೆ

ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ತಂಬಾಕು ಮಂಡಳಿ ಸದಸ್ಯ ಬಸವರಾಜು, ಹಬ್ಬನಕುಪ್ಪೆ ದಿನೇಶ್, ಕಾಂತರಾಜು, ಚಂದ್ರೇಗೌಡ, ವಿಕ್ರಂಗೌಡ ಇದ್ದರು.
ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಗೆ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ ಪರಿಶೀಲಿಸಿದರು. ತಂಬಾಕು ಮಂಡಳಿ ಸದಸ್ಯ ಬಸವರಾಜು, ಹಬ್ಬನಕುಪ್ಪೆ ದಿನೇಶ್, ಕಾಂತರಾಜು, ಚಂದ್ರೇಗೌಡ, ವಿಕ್ರಂಗೌಡ ಇದ್ದರು.
Published on

ಹುಣಸೂರು: ತಂಬಾಕು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುತ್ತಿದ್ದು, ನಾನು ಎಂದಿಗೂ ರೈತರೊಂದಿಗೆ ಇರಲಿದ್ದೇನೆ ಎಂದು ಮೈಸೂರು- ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ತಾಲೂಕಿನ ಕಟ್ಟೆಮಳಲವಾಡಿಯ ಡಿ.ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಗೆ ಮಂಗಳವಾರ ಭೇಟಿ ನೀಡಿ ರೈತರೊಂದಿಗೆ ಚರ್ಚಿಸಿದ ನಂತರ ಮಾತನಾಡಿದರು. ಪ್ರಸಕ್ತ ಸಾಲಿನಲ್ಲಿ ಹರಾಜು ಮಾರುಕಟ್ಟೆ ಆರಂಭವಾದಾಗ ನವರಾತ್ರಿ ಕಾರ್ಯಕ್ರಮಗಳಿದ್ದ ಕಾರಣ ಹಾಜರಾಗಲು ಸಾಧ್ಯವಾಗಲಿಲ್ಲ. ಇದೀಗ ಮಾರುಕಟ್ಟೆಗೆ ಬಂದಿದ್ದು, ರೈತರು ಸಾಕಷ್ಟು ಸಮಸ್ಯೆಗಳ ಕುರಿತು ಮನವಿ ಸಲ್ಲಿಸಿದ್ದಾರೆ. ಬೆಳೆಗೆ ಉತ್ತಮ ದರದ ನಿರೀಕ್ಷೆಯಲ್ಲಿ ರೈತರಿದ್ದಾರೆ ಎಂದರು.

ಆಂಧ್ರಪ್ರದೇಶದಲ್ಲಿ ಇದೀಗ ಮಾರುಕಟ್ಟೆ ಮುಕ್ತಾಯವಾಗಿದೆ. ಇನ್ನಷು ಖರೀದಿ ಕಂಪನಿಗಳು ಮಾರುಕಟ್ಟೆಗೆ ಬಂದ ನಂತರ ದರ ಮತ್ತಷ್ಟು ಏರುಮುಖವಾಗುವ ಸಾಧ್ಯತೆ ಇದೆ. ರೈತರಿಗೆ ಉತ್ತಮ ದರ ಸಿಗುವತ್ತ ನಾನು ಈಗಾಗಲೇ ಕಂಪನಿಗಳು ಮತ್ತು ಮಂಡಳಿಯೊಂದಿಗೆ ಸಂಪರ್ಕದಲ್ಲಿದ್ದೇನೆ. ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವುದೇ ನನ್ನ ಮೊದಲ ಆದ್ಯತೆ ಎಂದರು.

ಬೆಂಬಲ ಅಗತ್ಯ; ಹವಾಮಾನ ವೈಪರಿತ್ಯ ನಡುವೆಯೇ ರೈತರು ಬೆಳೆ ಬೆಳೆದಿದ್ದು, ಬೆಳೆನಾಶದಂತಹ ಪರಿಸ್ಥಿತಿಯಲ್ಲಿ ಆಂಧ್ರಪ್ರದೇಶದಲ್ಲಿ ರೈತರಿಗೆ ಸರ್ಕಾರ ಮತ್ತು ಮಂಡಳಿ ಆರ್ಥಿಕ ಸಹಾಯ ಹಸ್ತ ನೀಡಿದೆ. ಆದರೆ ಕರ್ನಾಟಕದಲ್ಲಿ ಇಂತಹ ಉಪಕ್ರಮಗಳು ಆಗಿಲ್ಲವೆಂದು ರೈತರು ತಿಳಿಸಿದಾಗ, ಗುಂಟೂರಿಗೆ ಭೇಟಿ ನೀಡಿದ್ದ ವೇಳೆ ಈ ಕುರಿತು ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ. ವಿಷಯದ ಕುರಿತು ಕೇಂದ್ರದ ಪ್ರತಿನಿಧಿಗಳೊಂದಿಗೂ ಚರ್ಚಿಸಿದ್ದೇನೆ. ಅನಧೀಕೃತ ಬೆಳೆಗಾರರಿಗೆ ಲೈಸನ್ಸ್ ನೀಡುವ ಕುರಿತು ಪ್ರಕ್ರಿಯೆಗಳು ಮುಂದುವರಿದಿವೆ. ಕಾರ್ಡ್‌ದಾರರಿಗೆ ಬೆಳೆ ಮಾರಾಟ ಮಾಡಲು ಈಗಲೇ ಅವಕಾಶ ಕಲ್ಪಿಸುವ ಕುರಿತು ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದೇನೆ ಎಂದರು.

ಬ್ಯಾಂಕ್ ಬಡ್ಡಿ ಏರಿಕೆ: ಈ ಬಾರಿ ಮಾರುಕಟ್ಟೆ ವಿಳಂಬದಿಂದಾಗಿ ಬ್ಯಾಂಕ್‌ಗಳಲ್ಲಿ ಬಡ್ಡಿದರದಲ್ಲಿ ಏರಿಕೆ ಉಂಟಾಗಿದೆ. ಅಕ್ಟೋಬರ್‌ನಲ್ಲಿ ಬ್ಯಾಂಕ್‌ಗೆ ಸಾಲ ಮರುಪಾವತಿ ಮಾಡಿದ್ದಲ್ಲಿ ಶೇ.7ರ ಬಡ್ಡಿದರ ಇರುತ್ತಿತ್ತು. ಇದೀಗ ಮಾರುಕಟ್ಟೆ ವಿಳಂಬದಿಂದಾಗಿ ಸಾಲ ಮರುಪಾವತಿ ಮಾಡಲು ಮತ್ತೊಂದು ತಿಂಗಳು ಅವಶ್ಯವಿದೆ. ಆದರೆ ಬ್ಯಾಂಕ್‌ನವರು ಮುಂದಿನ ತಿಂಗಳು ಶೇ.17ರಷ್ಟು ಬಡ್ಡಿ ಹೊರಿಸಲಿದ್ದಾರೆ ಎಂದು ರೈತ ಮಹದೇವ್ ದೂರಿದರು. ಈ ಕುರಿತು ಬ್ಯಾಂಕ್ ಮತ್ತು ಮಂಡಳಿ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಸಂಸದರು ತಿಳಿಸಿದರು.

ರೈತರ ಬಹು ವರ್ಷಗಳ ಬೇಡಿಕೆಯಾದ ನಿರ್ದೇಶಕರ ಕಚೇರಿ ಬೆಂಗಳೂರಿನಿಂದ ಮೈಸೂರಿಗೆ ಸ್ಥಳಾಂತರ ಮತ್ತು ಆರ್‌ಎಂಒಗಳ ಕಚೇರಿ ಮೈಸೂರಿನಿಂದ ಹುಣಸೂರಿಗೆ ಸ್ಥಳಾಂತರಿಸುವ ಕುರಿತು ಈಗಾಗಲೇ ಮಾತನಾಡಿದ್ದು, ಉಪಕ್ರಮಗಳನ್ನು ಮುಂದುವರಿಸಲಿದ್ದೇನೆ ಎಂದರು.
ಭೇಟಿ ವೇಳೆ ತಂಬಾಕು ಮಂಡಳಿ ಸದಸ್ಯ ಬಸವರಾಜು, ಹಬ್ಬನಕುಪ್ಪೆ ದಿನೇಶ್, ವಿಕ್ರಂ ಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ಕಾಂತರಾಜು, ನಗರಾಧ್ಯಕ್ಷ ನಾರಾಯಣ, ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ರೈತ ಮುಖಂಡರಾದ ಕಿರಣ್‌ಕುಮಾರ್, ಅಶೋಕ್, ಬಿ.ಎನ್.ನಾಗರಾಜಪ್ಪ, ವಿಷಕಂಠಪ್ಪ, ಉಂಡುವಾಡಿ ಚಂದ್ರೇಗೌಡ, ಬಿಳಿಕೆರೆ ಪ್ರಸನ್ನ, ನಾಗರಾಜ ಮಲ್ಲಾಡಿ, ಮೂರ್ತಿ, ಮೋದೂರು ಶಿವಣ್ಣ, , ಹರಾಜು ಅಧೀಕ್ಷಕರಾದ ಚಂದ್ರಶೇಖರ್, ಸಿದ್ದರಾಜು, ಬ್ರಿಜ್ ಭೂಷನ್, ಫೀಲ್ಡ್ ಅಧಿಕಾರಿಗಳಾದ ಕಿರಣ್‌ಕುಮಾಋ ಮಂಜುನಾಥ್, ಐಟಿಸಿಯ ಪೂರ್ಣೇಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net